ಕಾರವಾರ: ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ. ದೊರಕಿದ ಹಿನ್ನೆಲೆ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾಜಿ ಶಾಸಕಿ ರೂಪಾಲಿ ನಾಯ್ಕ್ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿದ ಬಿಜೆಪಿಗರು, ಕಾಂಗ್ರೆಸ್ ಸರಕಾರ, ಸಿಎಂ, ಸಚಿವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಗುತ್ತಿಗೆದಾರರ ಬಳಿ ಹಣ ಎಲ್ಲಿಂದ ಬಂತು? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದರು. ಇನ್ನು ಇದೇವೇಳೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬದಲು ಹೆಚ್ಚುವರಿ ಜಿಲ್ಲಾಧಿಕಾರಿ ಬಂದಿದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಗರು, ಡಿಸಿಯೇ ಬಂದು ಮನವಿ ಸ್ವೀಕರಿಸುವಂತೆ ಹಟ ಹಿಡಿದರು. ಕೊನೆಗೆ ಕೆಲ ಹೊತ್ತಿನ ಬಳಿಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೇ ಖುದ್ದು ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು.
ಇದೇವೇಳೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರ ವಿರುದ್ಧ ಹರಿಹಾಯ್ದರು. ಹಿಂದೆ ಬಿಜೆಪಿಗೆ 40% ಸರಕಾರ ಎಂದು ಆರೋಪ ಮಾಡಲಾಗಿತ್ತು. ಮಾಡಿದ ಆರೋಪಕ್ಕೆ ಕಾಂಗ್ರೆಸ್ ಯಾವುದೇ ಒಂದು ಪ್ರೂಫ್ ಕೂಡಾ ನೀಡಿಲ್ಲ. ಆದರೆ, ಕಾಂಗ್ರೆಸ್ನವರು 80% ಹಣ ನುಂಗುತ್ತಿದ್ದಾರೆ. ಪಂಚರಾಜ್ಯ ಚುನಾವಣೆಗೆ ಕಾಂಗ್ರೆಸ್ನ ಎಲ್ಲಾ ಸಚಿವರು, ಶಾಸಕರು ಕಮಿಷನ್ ದಂಧೆಗೆ ಕುಳಿತಿದ್ದಾರೆ ಎಂದು ಕಿಡಿಕಾರಿದರು.
ಕಾರವಾರದ ಶಾಸಕರು ಕೂಡಾ ಬಿಜೆಪಿ ಕಾಲದ ಕಾಮಗಾರಿಯನ್ನು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. 5 ಗ್ಯಾರಂಟಿಗಳನ್ನು ಸರಕಾರ ಘೋಷಿಸಿದರೂ ಇನ್ನೂ ಸರಿಯಾಗಿ ಅನುಷ್ಠಾನಗೊಳಿಸಿಲ್ಲ. 2 ಸಾವಿರ ರೂ. ಪಡೆಯಲು ಜನರು ಇನ್ನೂ ಅಲೆದಾಡುತ್ತಿದ್ದಾರೆ, ವಿದ್ಯುತ್ನಲ್ಲೂ ದೋಚಲಾಗುತ್ತಿದೆ. ಜನರಿಂದ ವಿವಿಧ ರೀತಿಯಲ್ಲಿ ಸರಕಾರ ಹಣ ದೋಚುತ್ತಿದೆ. ರೈತರು ಕಣ್ಣೀರು ಹರಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.