ಶಿರಸಿ : ತೋಟದಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕೆ ಸಮಸ್ಯೆಗೆ ಮೊದಲು ಸರಿಯಾದ ಪರೀಕ್ಷೆ ಮುಖ್ಯ ಎಂದು ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿಯ ಕೃಷಿ ತಜ್ಞ ವಿ.ಎಂ. ಹೆಗಡೆ ಸಿಂಗನಮನೆ ಅಭಿಪ್ರಾಯ ಪಟ್ಟರು.
ಸಂಪಖಂಡ ವಿವಿಧೋದ್ದಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಜಾನ್ಮನೆಯಲ್ಲಿ ಆಯೋಜಿಸಿದ್ದ ಅಡಿಕೆ ಎಲೆ ಚುಕ್ಕೆ ರೋಗ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. “ಕೊಲೆಟೋಟ್ರೈಕಮ್ ಶಿಲೀಂಧ್ರದಿಂದ ಬರುವ ಅಡಿಕೆ ಎಲೆ ಚುಕ್ಕೆ ರೋಗವು 1960ನೆ ಇಸವಿ ಸಮಯದಲ್ಲೂ ಕಾಣಿಸಿಕೊಂಡ ಉಲ್ಲೇಖವಿದೆ. ಶಿರಸಿ ತಾಲೂಕಿನ ಸಂಪಖಂಡ ಹೋಬಳಿ ಭಾಗದಲ್ಲಿ ಪ್ರಾರಂಭಿಕ ಹಂತದಲ್ಲಿದೆ. ವಾತಾವಣದಲ್ಲಿನ ವ್ಯತ್ಯಾಸದಿಂದಲೂ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ, ಹಾಗಾಗಿ ರೈತರು ಮೊದಲಿಗೆ ರೋಗ ಗುರುತಿಸುವಲ್ಲಿ ಜಾಗ್ರತರಾಗಬೇಕಾಗಿದೆ” ಎಂದರು.
ಇನ್ನೋರ್ವ ಅತಿಥಿಗಳಾಗಿದ್ದ ತೋಟಗಾರಿಕೆ ನಿರ್ದೇಶಕರಾದ ಗಣೇಶ್ ಹೆಗಡೆ ಮಾತನಾಡಿ, ಅಡಿಕೆ ತೋಟದಲ್ಲಿ ಬಣ್ಣ ಸುಣ್ಣ ಮುಚ್ಚಿಗೆಯ ಪ್ರಾಮುಖ್ಯತೆ ಹಾಗೂ ಸಾಂಪ್ರದಾಯಿಕ ಕೃಷಿ ಜೊತೆಯಲ್ಲಿ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡಲ್ಲಿ ರೋಗಗಳ ನಿಯಂತ್ರಣ ಸಾಧ್ಯ ಎಂದರು. ಸ್ಥಳೀಯ ರೈತರ ಪರವಾಗಿ ಮಾತನಾಡಿದ ವೆಂಕಟೇಶ ಹೆಗಡೆ ಹೊಸಬಾಳೆ, ಶೃಂಗೇರಿ, ಕಳಸ ಭಾಗದಲ್ಲಿ ರೋಗದ ತೀವ್ರತೆಯಿಂದ ತೋಟ ಸಂಪೂರ್ಣ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ರಘುಪತಿ ಭಟ್ಟ ಬೆಣ್ಣೆಗಿರಿ ಮಾತನಾಡಿ, ರೈತರು ವಿಚಲಿತರಾಗದೆ ಧೈರ್ಯದಿಂದ ರೋಗ ಹತೋಟಿಗೆ ಗಮನಹರಿಸಬೇಕು ಎಂದರು. ಸಂಘದ ಅಧ್ಯಕ್ಷರಾದ ಸುಬ್ರಾಯ ಸೀತಾರಾಮ ಹೆಗಡೆ ಜಾನ್ಮನೆ ಮಾತನಾಡಿ, ಸಾಮೂಹಿಕವಾಗಿ ಎಲ್ಲ ರೈತರೂ ಜಾಗೃತರಾಗಿ ರೋಗ ಪತ್ತೆ ಹಾಗೂ ಅಗತ್ಯ ಕ್ರಮ ಕೈಗಳ್ಳಬೇಕು ಎಂದು ಹೇಳಿದರು.
ಸಂಘದ ನಿರ್ದೇಶರಾದ ಗಣಪತಿ ಹೆಗಡೆ ಕಬ್ಬಿನಮನೆ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಹೆಗಡೆ ವಂದಿಸಿದರು.