Slide
Slide
Slide
previous arrow
next arrow

ದೇವಾಲಯಗಳ ಅಭಿವೃದ್ಧಿ ಹಣ ಬಿಡುಗಡೆಗೆ ಮಾಜಿ ಶಾಸಕಿ ರೂಪಾಲಿ ಒತ್ತಾಯ

300x250 AD

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಮಂಜೂರಾದ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ದೇವಾಲಯಗಳ ಅಭಿವೃದ್ಧಿಗೆ ಒಟ್ಟು 11 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಆ ಪ್ರಕಾರ ಮೊದಲ ಹಂತದಲ್ಲಿ 2 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ವಿವಿಧ, ದೇವಾಲಯಗಳಿಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 4 ಕೋಟಿ ರೂ. ಬಿಡುಗಡೆಯಾಗಿ ದೇವಾಲಯಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಮೂರೂ ಹಂತದ ಅನುದಾನ ಮಂಜೂರಾತಿ ಆದೇಶ ಆಗಿತ್ತು. ಎರಡು ಹಂತದ ಹಣ ಬಿಡುಗಡೆಯೂ ಆಗಿತ್ತು. ಅದನ್ನು ಆಯಾ ದೇವಾಲಯಗಳಿಗೆ ಹಸ್ತಾಂತರಿಸಲಾಗಿದ್ದು, ಅಭಿವೃದ್ಧಿ ಕಾಮಗಾರಿಯೂ ನಡೆಯುತ್ತಿದೆ. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಕಾಂಗ್ರೆಸ್ ಸರ್ಕಾರ ಮೂರನೇ ಹಂತದ 5 ಕೋಟಿ ರೂ. ಬಿಡುಗಡೆಗೆ ಮುಂದಾಗಲಿಲ್ಲ. ಬಿಜೆಪಿ ಸರ್ಕಾರ ಇರುವಾಗ ಸರ್ಕಾರಿ ಆದೇಶವಾಗಿದ್ದರೂ ಈಗಿನ ಸರ್ಕಾರ ಇದುವರೆಗೆ ಈ ಬಗ್ಗೆ ಯಾವುದೆ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮದೇವಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ಕೆಲವೆಡೆ ಕಟ್ಟಡ ನಿರ್ಮಾಣಕ್ಕೆ ಯೋಜಿಸಿದ್ದರು. ಸರ್ಕಾರದ ಹಣದ ನಿರೀಕ್ಷೆಯಲ್ಲಿ ಕೆಲವೆಡೆ ಪ್ರಾಥಮಿಕ ಕಾಮಗಾರಿಗಳನ್ನೂ ಆರಂಭಿಸಿದ್ದರು. ಆದರೆ ಈಗ ಹಣ ಬಿಡುಗಡೆಯಾಗದೆ ಇರುವುದಿಂದ ಆ ಎಲ್ಲ ದೇವಾಲಯಗಳ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಂತಾಗಿದೆ. ದೇವಾಲಯಗಳ ಆಡಳಿತ ಮಂಡಳಿಯವರು ತೀವ್ರ ನಿರಾಶರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

300x250 AD

ನಾನು ವಿಶೇಷ ಪ್ರಯತ್ನದಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ಹಲವು ದೇವಾಲಯಗಳ ಅಭಿವೃದ್ಧಿಗೆ 11 ಕೋಟಿ ರೂ.ಗಳನ್ನು ನೀಡಲು ಯೋಜನೆ ರೂಪಿಸಿದ್ದು ಅದರಂತೆ ಆದೇಶವೂ ಆಗಿತ್ತು. ಈಗಿನ ಸರ್ಕಾರ ಯಾವ ಕಾರಣಕ್ಕೆ ದೇವಾಲಯಗಳಿಗೆ ನೀಡಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾಮಗಾರಿ ಸರ್ಕಾರದಿಂದ ನಡೆಯುತ್ತಿಲ್ಲ, ಇದು ಜನತೆಯಲ್ಲೂ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ದೇವಸ್ಥಾನಗಳಿಗೂ ಹಣ ಕೊಡಲು ಹಿಂದೇಟು ಹಾಕುತ್ತಿರುವುದು ವಿಷಾದದ ಸಂಗತಿಯಾಗಿದೆ. ದೇವಾಲಯಕ್ಕೂ ಹಣ ನೀಡದಷ್ಟು ಬಡತನ ಸರ್ಕಾರಕ್ಕೆ ಬಂದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ದೇವಾಲಯದ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಮೂರನೇ ಹಂತದ ಹಣ ಬಿಡುಗಡೆಗೆ ಈಗಾಗಲೆ ವಿಳಂಬವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಕೂಡಲೆ ಈ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top