ಬೆಂಗಳೂರು: ಸಂಗೀತ ಎಂಬುದು ಪರಿಶ್ರಮ, ಕಠಿಣ ಶ್ರಧ್ಧೆಯಿಂದ ಒಲಿಯುವ ವಿದ್ಯೆ. ಸಾಕಷ್ಟು ವರ್ಷಗಳ ಕಾಲ ಸರಿಯಾಗಿ ಗುರುಮುಖೇನ ಕಲಿತ ಮೇಲೆ ಮಾತ್ರ ಸ್ವರ ಸಿದ್ಧಿ ಹಾಗೂ ರಾಗಗಳ ಮೇಲೆ ಹಿಡಿತ ಪ್ರಾಪ್ತಿಯಾಗುತ್ತದೆ ಎಂದು ಪ್ರೊ. ಮಲ್ಲೇಪುರಂ ವೆಂಕಟೇಶ್ ಅಭಿಪ್ರಾಯಪಟ್ಟರು.
ಅವರು ಮಲ್ಲೇಶ್ವರಂದ ಹವ್ಯಕ ಸಭಾಂಗಣದಲ್ಲಿ ನಡೆದ ಸ್ವರಗಾಂಧಾರ ಸಂಗೀತ ವಿದ್ಯಾಲಯದ ವಿಂಶತಿ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ಹಂತ ಅಭ್ಯಾಸ ಆದ ನಂತರವೇ ಕಾರ್ಯಕ್ರಮ ನೀಡಲು ಗುರು ಒಪ್ಪಿಗೆ ನೀಡುತ್ತಿದ್ದರು. ಅದಕ್ಕೆ ಮೊದಲು ಗುರುಗಳು ತಮ್ಮ ಶಿಷ್ಯರನ್ನು ಬೇರೆ ಬೇರೆ ಘರಾಣೆಗಳ ಸಾಧಕರ ಸಂಗೀತ ಸರಿಯಾಗಿ ಕೇಳಿ ಬರಲು ಹೇಳುತ್ತಿದ್ದರು. ಸಂಗೀತ ಸಿದ್ಧಿಸ ಏಕಾದ್ರೆ ಮೊದಲು ಸರಿಯಾದ ಕೇಳುಗರಾಗಬೇಕು. ಕಾರ್ಯಕ್ರಮದ ಹಂಬಲ, ಬೇಗ ಶ್ರೇಷ್ಠ ಸಾಧಕ ರಾಗುವ ಹಂಬಲ ಪಾಲಕರಿಗೂ ಹಾಗೂ ಶಿಷ್ಯ ರಿಗೂ ಇರಬಾರದು ಎಂದರು.
ಖ್ಯಾತ ಗಾಯಕಿ ಪೂರ್ಣಿಮಾ ಭಟ್ಟ ಮಾತನಾಡಿ, ಸಂಗೀತ ಎಂದೂ ಭಯದಿಂದ ಕಲಿಯುವ ವಿದ್ಯೆಯಲ್ಲ. ಗುರುವು ಪ್ರೀತಿಯಿಂದ ಕಲಿಸಬೇಕು. ಶಿಷ್ಯ ಗೌರವದಿಂದ ಕಲಿಯಬೇಕು. ನಿತ್ಯ ಅಭ್ಯಾಸ ಇದ್ದಾಗ ಮಾತ್ರ ಕಲೆ ಸಿದ್ಧಿಸುತ್ತದೆ ಹಾಗೂ ಸ್ವಂತಕ್ಕೆ ಆನಂದ ಸಿಗುತ್ತದೆ. ಅದೇ ಸಂಗೀತದ ಮಹತ್ವ ಹಾಗೂ ತನಗೆ ಗುರುವಂದನೆ ಸಲ್ಲಿಸಿದ ಪ್ರತಿಭಾ ಹೆಗಡೆಯವರ ಪರಿಶ್ರಮ ಹಾಗೂ ಸಂಗೀತದ ಕುರಿತಾಗಿನ ಪ್ರೀತಿ ಮತ್ತು ಅವರಿಗಿದ್ದ ಸ್ವರ ರಾಗ ಹಿಡಿತವನ್ನು ಪ್ರಶಂಸಿಸಿ, ಸಂಗೀತ ವಿದ್ಯಾಲಯಕ್ಕೆ ಶುಭ ಕೋರಿದರು.
ಅತಿಥಿಗಳಾಗಿದ್ದ ಸಪ್ತಕ ಸಂಸ್ಥೆಯ ಸಂಸ್ಥಾಪಕ ಜಿ.ಎಸ್.ಹೆಗಡೆ ಮಾತಾನಾಡಿ, ಬೆಂಗಳೂರಿನಲ್ಲಿ ಹಳ್ಳಿಯಿಂದ ಬಂದು 20 ವರ್ಷಗಳಿಂದ ನಿರಂತರ ಗುರುವಂದನಾ ಎಂಬ ಸಂಗೀತ ಕಾರ್ಯಕ್ರಮ ಮಾಡುತ್ತ ಬಂದಿರುವದು ಮಹಾ ಸಾಧನೆ ಎಂದರು.
ಪ್ರತಿಭಾ ಹೆಗಡೆ, ಜಗದೀಶ್ ಹೆಗಡೆ ಹಾಗೂ ಸಂಸ್ಥೆಯ ವಿಶ್ವಸ್ಥರು ಸೇರಿ ಅತಿಥಿಗಳನ್ನು ಸನ್ಮಾನಿಸಿ, ಸಂಗೀತಾಸಕ್ತರನ್ನು ಗೌರವಿಸಿದರು. ಪ್ರತಿಭಾ ಜಗದೀಶ್ ಹೆಗಡೆ ಈ ಸಂಗೀತ ವಿದ್ಯಾಲಯದ ಸ್ಥಾಪಕಿಯಾಗಿ ಕಳೆದ 20 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತ ಪಾಠ ಮಾಡುತ್ತಿದ್ದಾರೆ. ಸ್ವತಃ ಅವರೂ ಸಹ ಖ್ಯಾತ ಗಾಯಕಿ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿಯವರಲ್ಲಿ ಶಿಷ್ಯರಾಗಿ ಅಭ್ಯಸಿಸಿ, ಅವರನ್ನು ವಿಶೇಷವಾಗಿ ಗುರುವಂದನೆ ಗೈದರು. ರೇಖಾ ಹೆಗಡೆ ಹಾಗೂ ಶಾಂತಾ ಹೆಗಡೆ ಸಂಗೀತ ಜ್ಞಾನದ ಮಾತುಗಳನ್ನು, ವಿಶೇಷಗಳನ್ನು ಉಲ್ಲೇಖಿಸುತ್ತ ಸುಂದರವಾಗಿ ನಿರೂಪಿಸಿದರು. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿದರು. ಅವರಿಗೆ ಪ್ರಕಾಶ ದೇಶಪಾಂಡೆ ತಬಲಾದಲ್ಲಿ ಹಾಗೂ ನಾಗರಾಜ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು.
ಅತ್ಯಂತ ಸ್ಮರಣೀಯ ವಾಗಿರುವಂತೆ ಪೂರ್ಣಿಮಾ ಭಟ್ಟರವರು ಮಾರವಾ ರಾಗವನ್ನು ಹಾಗೂ ರಾಗಮಾಲಿಕಾ ಪ್ರಸ್ತುತ ಪಡಿಸಿದರು. ಮರಾಠಿ ನಾಟ್ಯ ಗೀತ ಹಾಡಿ ನಾದಾನಂದ ನೀಡಿದರು. ಅವರಿಗೆ ಸೂರಿ ಉಪಾಧ್ಯಾಯರು ಹಾರ್ಮೋನಿಯಂ ನಲ್ಲಿ ಹಾಗೂ ಗುರುಮೂರ್ತಿ ವೈದ್ಯರು ತಬಲಾ ಸಾಥ್ ನೀಡಿದರು.