ಕಾರವಾರ: ನೀರಿರದ ಜಾಗದಿಂದ ಜಲಜೀವನ ಮಿಷನ್ ಯೋಜನೆಯಡಿ ನೀರೆತ್ತಿ, ಕುಮಟಾ ತಾಲೂಕಿನ 14 ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಟಾದಲ್ಲಿ 169 ಕೋಟಿಯ ಜೆಜೆಎಂ ಯೋಜನೆ ಪ್ರಗತಿಯಲ್ಲಿದೆ. ತಾಲೂಕಿನ ಗ್ರಾ.ಪಂ.ಗಳಿಗೆ ಕುಡಿಯುವ ನೀರು ಕೊಡಲು ಅಘನಾಶಿನಿ ಕೊಳ್ಳದ ಜನತೆಯ ಯಾವುದೇ ವಿರೋಧವಿಲ್ಲ. ಆದರೆ ನೀರು ಎತ್ತಲು ಮುಂದಾಗಿರುವ ಸ್ಥಳ ಸರಿಯಾದುದಲ್ಲ. ಬೇಸಿಗೆಯಲ್ಲಿ ಆ ಜಾಗದಲ್ಲಿ ನೀರೇ ಇರುವುದಿಲ್ಲ. ಗುರುತಿಸಿದ ಜಾಗದ ಪಕ್ಕದಲ್ಲೇ ಯಾವತ್ತೂ ನೀರಿರುವ ಪ್ರದೇಶವಿದ್ದು, ಅಲ್ಲಿಂದ ನೀರು ಎತ್ತಿ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಬಹುದಾಗಿದೆ. ಯೋಜನೆಗೆ ಅಲ್ಲಿನ ರೈತರ ವಿರೋಧವಿಲ್ಲ, ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಸ್ಥಳ ಬದಲಾವಣೆ ಮಾಡುವಂತೆ ಜಿಲ್ಲಾಧಿಕಾರಿಗೂ ಮನವಿ ಮಾಡಿಕೊಂಡಿದ್ದೇವೆ ಎಂದರು.
ಅಘನಾಶಿನಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗಣಪತಿ ಗೌಡ ಮಾತನಾಡಿ, ಕುಮಟಾ- ಹೊನ್ನಾವರಕ್ಕೆ ನೀರು ಪೂರೈಸಲು ಮರಾಕಲ್ ಯೋಜನೆಗೂ, ಸ್ಥಳೀಯ ರೈತರು, ವನವಾಸಿಗಳ ತೋಟಗಳಿಗೆ ನೀರು ಒದಗಿಸಲು ಏತನೀರಾವರಿ ಯೋಜನೆಗೂ ದೀವಳ್ಳಿಯೇ ನೀರು ಎತ್ತುವ ಕೇಂದ್ರವಾಗಿದೆ. ದೀವಳ್ಳಿಯಿಂದ ಕತಗಾಲ್‌ವರೆಗೆ ಸಾವಿರಾರು ಎಕರೆ ಜಾಗದಲ್ಲಿ ಅಡಿಕೆ, ತೆಂಗು, ಕಬ್ಬು, ಬಾಳೆಯನ್ನ ಹೆಚ್ಚಾಗಿ ಹಿಂದುಳಿದ ಹಾಲಕ್ಕಿ ಒಕ್ಕಲಿಗರು, ಮರಾಠಿಗರು, ಹವ್ಯಕರು ಬೆಳೆಯುತ್ತಿದ್ದಾರೆ. ಒಂದುವೇಳೆ ದೀವಳ್ಳಿಯಿಂದಲೇ ಇದೀಗ ಮೂರನೇ ಯೋಜನೆಯಾಗಿ ಜೆಜೆಎಂಗೆ ನೀರು ಎತ್ತಿದರೆ ಈ ರೈತರಿಗೆಲ್ಲ ನೀರಿನ ಅಭಾವ ಸೃಷ್ಟಿಯಾಗುತ್ತದೆ ಎಂದರು.
ಕಳೆದ ವರ್ಷ ಮೇ ತಿಂಗಳಿನಲ್ಲಿ ಇಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿತ್ತು. ಅಲ್ಲದೇ ಇಜ್ಞಾನಿಗಳ ತಂಡ ಈ ಭಾಗದಲ್ಲಿ ಪರಿಶೀಲನೆ ನಡೆಸಿ, ಈ ಸ್ಥಳ ದೊಡ್ಡ ಯೋಜನೆಗಳಿಗೆ ಅರ್ಹವಲ್ಲ ಎಂದು ವರದಿ ನೀಡಿದ್ದಾರೆ. ವರದಿಯನ್ನ ಪ್ರಧಾನಂತ್ರಿಗಳಿಗೂ ಕಳುಹಿಸಲಾಗಿದೆ. ಹೀಗಿರುವಾಗ ಇಲ್ಲಿಯೇ ಜೆಜೆಎಂ ಯೋಜನೆಯನ್ನ ಮುಂದುವರಿಸಿದಾಗ ನಾವು ತಡೆದಿದ್ದೇವೆ. ನೀರಿನ ಲಭ್ಯತೆ ಆಧಾರದಲ್ಲಿ ಯೋಜನೆಯ ಸ್ವರೂಪ, ಸ್ಥಳ ಬದಲಾವಣೆ ಮಾಡಿ ಪರಿಷ್ಕೃತ ಯೋಜನೆ ಜಾರಿ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದರು.
ಮುಖಂಡ ಟಿ.ಪಿ.ಹೆಗಡೆ, ಕಲ್ಲಬ್ಬೆ ಗ್ರಾ.ಪಂ ಸದಸ್ಯ ಹಿರಿಯ ಗೌಡ, ಗೇರು ಉದ್ಯಮಿ ರಾಜರಾಮ್ ಭಟ್ಟ, ಸಾಮಾಜಿಕ ಹೋರಾಟಗಾರ ವಿಷ್ಣು ಪಟಗಾರ, ದತ್ತು ಹರಿಕಂತ್ರ, ಮೋಹನ್ ಪಟಗಾರ, ಗಣಪತಿ ಗೌಡ, ಹಮ್ಮು ಗೌಡ ಇದ್ದರು.