ಭಟ್ಕಳ: ಭಾರತ ಸರ್ಕಾರವು ಗಾಂಧೀಜಿಯವರ ಕಾಲದಿಂದಲೂ ಪಾಲಿಸುತ್ತ ಬಂದಿರುವ ವಿದೇಶಾಂಗ ನೀತಿಗೆ ಬದ್ಧವಾಗಿರಬೇಕು ಮತ್ತು ಫ್ಯಾಲಸ್ತೇನಿಯರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ಮಜ್ಲಿಸೆ ಇಸ್ಲಾಹ್ ವ ತಂಝಿಮ್ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತಂತೆ ಪ್ರಕಟನೆ ಹೊರಡಿಸಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ ಹಾಗೂ ರಾಜಕೀಯ ಸಮಿತಿಯ ಸಂಚಾಲಕ ಸಯ್ಯದ್ ಇಮ್ರನ್ ಲಂಕಾ, ಗಾಜಾ ಕರಾವಳಿಯಲ್ಲಿ ನಡೆಯುತ್ತಿರುವ ನಿರ್ದಿಷ್ಟ ಗುರಿಯಿಲ್ಲದ ಬಾಂಬ್ ದಾಳಿಗಳ ಮೂಲಕ ಅಮಾಯಕ ಜನರ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಮೂಲಭೂತ ಸೌಲಭ್ಯಗಳಾದ ನೀರು, ಆಹಾರ, ವಿದ್ಯುತ್ ಮತ್ತು ಇಂಧನ ಪೂರೈಕೆಯನ್ನು ತಕ್ಷಣವೇ ಪುನಃಸ್ಥಾಪಿಸಬೇಕೆಂದು ಒತ್ತಾಯಿಸುತ್ತೇವೆ. ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ನಾವು ಬಯಸುತ್ತೇವೆ. ಪ್ರದೇಶದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಭಾರತ ಸರ್ಕಾರದ ಪಾತ್ರವನ್ನು ನಾವು ಎದುರು ನೋಡುತ್ತಿದ್ದೇವೆ. ಇದರ ಜೊತೆಗೆ, ಎರಡೂ ಪ್ರದೇಶಗಳಲ್ಲಿ ನಾಗರಿಕರ ಹತ್ಯೆ ನಡೆಯುತ್ತಿರುವುದನ್ನು ನಾವು ಖಂಡಿಸುತ್ತೇವೆ. ಮಸೀದಿಗಳು, ಶಾಲೆಗಳು ಮತ್ತು ಚರ್ಚುಗಳನ್ನು ಒಳಗೊಂಡ ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಭಾರತವು ಫೆಲೆಸ್ತೀನಿಯರನ್ನು ಬೆಂಬಲಿಸಬೇಕು ಅಲ್ಲದೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಘರ್ಷಣೆ ತೀವ್ರಗೊಂಡಿರುವುದಕ್ಕೆ ಅವರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳು ಸೇರಿದಂತೆ ಫ್ಯಾಲಸ್ತೇನಿಯರ ಬದುಕನ್ನು ಹರಣ ಮಾಡಿದ ಬಲಪಂಥೀಯ ನೇತನ್ಯಾಹು ಸರಕಾರದ ಅಕ್ರಮಗಳ ಫಲಿತಾಂಶವೇ ಈ ಸಂಘರ್ಷ. ಇಸ್ರೇಲ್ನ ಅತಿಕ್ರಮಣ ಮತ್ತು ಅಲ್ ಅಕ್ಸ ಮಸೀದಿಯ ಮೇಲೆ ಅದು ನಿಯಂತ್ರಣ ಪಡಕೊಳ್ಳುತ್ತಿರುವುದರ ಕಾರಣವೂ ಈ ಘರ್ಷಣೆಯ ಹಿಂದೆ ಇದೆ ಎಂದು ತಂಝೀಮ್ ಅಭಿಪ್ರಾಯಪಟ್ಟಿದೆ.
ಇಂಗ್ಲೆಂಡ್ ಇಂಗ್ಲಿಷರಿಗೆ ಮತ್ತು ಫ್ರಾನ್ಸ್ ಫ್ರೆಂಚರಿಗೆ ಎಂಬಂತೆ ಫೆಲಸ್ತೀನ್ ಫೆಲಸ್ತೀನಿಯರಿಗಾಗಿ ಎಂಬ ಮಹಾತ್ಮ ಗಾಂಧಿಯವರ ಮಾತುಗಳು ಭಾರತದ ನಿಲುವಾಗಿರಬೇಕು. ಅತ್ತ ಇಸ್ರೇಲ್ ಗಾಝಾವನ್ನು ನಾಲ್ಕು ಸುತ್ತಲೂ ಸುತ್ತುವರಿದು ಲಕ್ಷಾಂತರ ಇಸ್ರೇಲಿ ಸೈನಿಕರು ಭೂ ಯುದ್ಧಕ್ಕೂ ತಯಾರಿ ನಡೆಸುತ್ತಿದ್ದಾರೆ. ಫೆಲಸ್ತೀನಿನ ಮತ್ತು ಇಸ್ರೇಲಿನ ನಡುವೆ ತೀವ್ರ ತೆರನಾದ ಯುದ್ಧ ಇದು. ಇದು ಮಧ್ಯಪ್ರಾಚ್ಯದುದ್ದಕ್ಕೂ ಹರಡಬಹುದು. ಅದನ್ನು ತಡೆಯುವುದಕ್ಕೆ ಎಲ್ಲ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಅನುವು ಮಾಡಿಕೊಡಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.