ಕುಮಟಾ: ತಾಲೂಕಿನ ಕಾಗಾಲ ಗ್ರಾಮ ಪಂಚಾಯತದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶಾಸಕ ದಿನಕರ ಶೆಟ್ಟಿ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಶಾಸಕರು, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸ್ವಚ್ಛ ಭಾರತ ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಗರ ಹಾಗೂ ಗ್ರಾಮೀಣ ಭಾಗದ ಸ್ವಚ್ಛತೆಗಾಗಿ ವಿಶೇಷ ಕಾಳಜಿವಹಿಸುತ್ತಿದೆ. ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ಪ್ರತಿಯೊಬ್ಬ ನಾಗರಿಕರು ಗ್ರಾಮಪಂಚಾಯತ್ ಜೊತೆಗೆ ಕೈಜೋಡಿಸಬೇಕು. ಕಸದ ಸಂಗ್ರಹಕ್ಕಾಗಿ ಪ್ರತಿಯೊಂದು ಮನೆಗೆ ಕಸದಬುಟ್ಟಿ ನೀಡಲಾಗಿದೆ ಹಾಗೂ ಕಸದ ಸಾಗಾಟಕ್ಕಾಗಿ ಹೊಸ ವಾಹನವನ್ನು ಸರ್ಕಾರದಿಂದ ಗ್ರಾಮ ಪಂಚಾಯತ್ ಗೆ ನೀಡಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರದ್ದು. ಕಸದಿಂದ ಮುಕ್ತವಾದ ಪರಿಸರವನ್ನು ನಿರ್ಮಾಣ ಮಾಡುವ ಮೂಲಕ ಇಂದಿನ ಹಾಗೂ ಮುಂದಿನ ಪೀಳಿಗೆಯವರ ಆರೋಗ್ಯಯುತ ಜೀವನಕ್ಕಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಕಾಗಾಲ ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಿ ಪಟಗಾರ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಾಜಿ ಅಧ್ಯಕ್ಷ ಶಶಿಕುಮಾರ್ ನಾಯ್ಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ನಾಯಕ, ಎನ್ಆರ್ಎಲ್ಎಮ್ ಸಾಯೋಜಕ ಅಶ್ವಿನ್ ನಾಯ್ಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ನಾಯ್ಕ ಹಾಗೂ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.