ಭಟ್ಕಳ: ಜಿಲ್ಲಾಡಳಿತದ ಆದೇಶದ ಮೇರೆಗೆ ತಹಸೀಲ್ದಾರ ನೇತೃತ್ವದ ತಂಡವು ಬುಧವಾರದಂದು ಪಟ್ಟಣದ ಪಟಾಕಿ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದರು.
ತಹಸೀಲ್ದಾರ ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ನಗರ ಠಾಣೆ ಪಿಎಸ್ಐ ಶಿವಾನಂದ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಪಟ್ಟಣದ ನಾನಾ ಕಡೆ ಪಟಾಕಿ ಮಾರಾಟ ಮಾಡುವ ಅಂಗಡಿಗಳು ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಸಂಶುದ್ದೀನ ಸರ್ಕಲ್, ಹಳೆ ಬಸ್ ನಿಲ್ದಾಣ, ಪೇಟೆ ಮುಖ್ಯ ರಸ್ತೆ, ಮಾರಿಗುಡಿ, ಹೂವಿನ ಪೇಟೆ ಹಾಗೂ ಕಳಿ ಹನುಮಂತ ದೇವಸ್ಥಾದ ಸಮೀಪದ ಒಟ್ಟು 8-10 ಪಟಾಕಿ ಮಾರಾಟ ಮಾಡುವ ಅಂಗಡಿ, ಜನರಲ್ ಸ್ಟೋರ್ಸ್, ಕಿರಾಣಿ ಅಂಗಡಿಗಳಿಗೆ ಕುದ್ದು ತಹಸೀಲ್ದಾರ ತೆರಳಿದರು. ಈ ವೇಳೆ ಅಂಗಡಿಕಾರರಿಂದ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಲು ಅವಕಾಶವಿಲ್ಲ. ಒಂದಾನು ವೇಳೆ ಮಾರಾಟ ಮಾಡಿದಲ್ಲಿ ಅದು ಅಪರಾಧವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ದಾಳಿಯ ವೇಳೆ ಒಂದು ಲೈಸೆನ್ಸ್ ಪಡೆದ ಅಂಗಡಿ ಮಳಿಗೆಯಲ್ಲಿ ಸ್ಪಾರ್ಕಲ್ (ಸುರಸುರಬತ್ತಿ) ಪ್ಯಾಕ್ ಪತ್ತೆಯಾಗಿದ್ದು ಅವರಿಗೆ ಪುರಸಭೆಯಿಂದ 500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು