ಶಿರಸಿ: ಅಡಿಕೆ ತೋಟಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗವನ್ನು ನಿಯಂತ್ರಣ ಕುರಿತ ಮಾಹಿತಿ ಕಾರ್ಯಾಗಾರವನ್ನು ಟಿ.ಎಸ್.ಎಸ್. ಪ್ರಧಾನ ಕಛೇರಿಯಲ್ಲಿ ಅ.9, ಸೋಮವಾರದಂದು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ತೋಟಗಾರಿಕಾ ಇಲಾಖೆ ಶಿರಸಿಯ ಅಧಿಕಾರಿಗಳಾದ ಗಣೇಶ ಹೆಗಡೆ ಹಾಗೂ ಶಿವಾನಂದ ಆರ್. ಪಾಲ್ಗೊಂಡು ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಮಾಹಿತಿಯನ್ನು ನೀಡುತ್ತಾ ಮಾತನಾಡಿದ ಗಣೇಶ ಹೆಗಡೆ, ಆಗಸ್ಟ್ ತಿಂಗಳಿನಲ್ಲಿ ಉಂಟಾದ ಮಳೆಯ ಅಭಾವ ಹಾಗೂ ಮಣ್ಣಿನಲ್ಲಿರುವ ಪೊಟ್ಯಾಶಿಯಮ್ನ ಕೊರೆತಯೇ ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಪ್ರಮುಖ ಕಾರಣ ಎಂದರು. ಕಾರ್ಯಗಾರಕ್ಕೆ ಆಗಮಿಸಿದ ರೈತರು ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ತಾವು ಅನುಸರಿಸಿದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡಿದರು. ಕಾರ್ಯಗಾರದಲ್ಲಿ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣದ ಬಗ್ಗೆ ಹಲವಾರು ವಿಷಯಗಳು ಪರಸ್ಪರ ಮಂಡನೆಯಾದವು.
ರೈತರಲ್ಲಿ ಅಡಿಕೆ ಎಲೆ ಚುಕ್ಕೆ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸಂಘದ ವತಿಯಿಂದ ಅಡಿಕೆ ಎಲೆ ಚುಕ್ಕೆ ರೋಗದ ಬಗ್ಗೆ ರೈತರಿಂದ ಮಾಹಿತಿಯನ್ನು ಪಡೆಯಲು ಸಮೀಕ್ಷೆಯನ್ನು ನಡೆಸಿ ಅದರಂತೆ ಕೇಂದ್ರೀಯ ತೋಟಗಳ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ)ಯ ಮಾರ್ಗ ಸೂಚಿಯ ಪ್ರಕಾರ ರೋಗದ ಹತೋಟಿಗೆ ಬಳಸುವ ಕ್ರಮಗಳನ್ನು ಸಂಘದ ವಾಟ್ಸ್ಆಪ್ ಗ್ರೂಪ್ನಲ್ಲಿ ಪ್ರಸಾರ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ, ಮತ್ತಿಘಟ್ಟ, ಅಡಿಕೆ ಎಲೆ ಚುಕ್ಕೆ ರೋಗದ ಹತೋಟಿಗೆ, ಕೇಂದ್ರೀಯ ತೋಟಗಳ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ)ಯ ಮಾರ್ಗ ಸೂಚಿಯ ಪ್ರಕಾರ ಬಳಸುವ ಔಷಧಿಗಳಿಗೆ ಸಂಘದ ವತಿಯಿಂದ ಸಹಾಯಧನ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು. ನಂತರ ಮಾತನಾಡಿದ ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಎನ್. ಭಟ್ಟ, ತೋಟಿಮನೆ ಈ ದಿನಗಳಲ್ಲಿ ಹೆಚ್ಚುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕ್ರಮಗಳ ಬಗ್ಗೆ ತಜ್ಞರ ಸಲಹೆಯಂತೆ ಔಷಧಗಳನ್ನು ಪ್ರಯೋಗಿಸಿ ಫಲಿತಾಂಶವನ್ನು ಪಡೆಯುವುದು ಸೂಕ್ತ ಎಂದು ಹೇಳಿದರು ಹಾಗೂ ಹಳೆಯ ಮೂಲ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ರೈತರಿಗೆ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಬಳಸುವ ಔಷಧಿಗಳಿಗೆ ಸಹಾಯಧನ ಸಿಗುವಂತೆ ಹಾಗೂ ಈಗಾಗಲೇ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ರೈತರು ಬಳಸಿದ ಔಷಧಿಗಳಿಗೂ ಸಹ ಸಹಾಯ ಧನ ಸಿಗುವಂತೆ ಮಾಡಲು ಸರ್ಕಾರಕ್ಕೆ ಮನವಿಯನ್ನು ನೀಡಲು ನಿರ್ಧರಿಸಲಾಯಿತು. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಿಗೆ ಇರುವುದರಿಂದ ಅವರ ಅನುಕೂಲಕ್ಕಾಗಿ ಬಹು ರಾಷ್ಟ್ರೀಯ ಕಂಪನಿಗಳಿಂದ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಬಳಸುವ ಔಷಧಿಗಳು ಸಣ್ಣ ಸಣ್ಣ ಪ್ಯಾಕೆಟ್ ರೂಪದಲ್ಲೂ ಸಹ ಸಿಗುವಂತೆ ಮಾಡಲು ನಿರ್ಧರಿಸಲಾಯಿತು. ಕೇಂದ್ರೀಯ ತೋಟಗಳ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ)ಯ ಮಾರ್ಗ ಸೂಚಿಯ ಪ್ರಕಾರ ಔಷಧಿಗಳನ್ನು ನಿಯಮಿತವಾಗಿ ಸಿಂಪಡಣೆ ಮಾಡುವ ಮೂಲಕ ಅಡಿಕೆ ಎಲೆ ಚುಕ್ಕೆ ರೋಗವನ್ನು ಹತೋಟಿಯಲ್ಲಿ ಇಡುವುದು ಸೂಕ್ತವಾದ ನಿರ್ಣಯ ಎಂಬ ತೀರ್ಮಾನವನ್ನು ಕಾರ್ಯಾಗಾರದಲ್ಲಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ, ಮತ್ತಿಘಟ್ಟ, ಉಪಾಧ್ಯಕ್ಷ ಮಹಾಬಲೇಶ್ವರ ಎನ್. ಭಟ್ಟ, ತೋಟಿಮನೆ, ಸಂಘದ ಪ್ರಧಾನ ವ್ಯವಸ್ಥಾಪಕ (ಪ್ರಭಾರಿ), ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ತಜ್ಞರು, ರೈತ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.