ಕಾರವಾರ: ಉತ್ತರ ಕನ್ನಡದ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೈಟೆಕ್ ಮೆಡಿಕಲ್ ಸೌಲಭ್ಯಗಳಿವೆ. ಆದರೆ, ಇಲ್ಲಿ ಮಾತ್ರ ಒಂದು ಅವಘಡ ಆದರೂ ಜೀವ ಉಳಿಸಿಕೊಳ್ಳಲು ಕನಿಷ್ಠ 100 ಕಿಲೋ ಮೀಟರ್ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಈ ಜ್ವಲಂತ ಸಮಸ್ಯೆ ನೀಗಿಸಲು, ಸರಕಾರದ ಕಣ್ಣು ತೆರೆಸಲು ನವೆಂಬರ್ 2ರಿಂದ 9ತನಕ ಶಿರಸಿಯಿಂದ ಕಾರವಾರದ ತನಕ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರಿನಲ್ಲಿ ನಡೆದ ದುರಂತದ ಬಳಿಕ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಕ್ಕೊತ್ತಾಯದ ಹೋರಾಟಗಳು ನಡೆದವು. ಆದರೆ, ಪ್ರಯೋಜನ ಆಗಲಿಲ್ಲ. ಟ್ರಾಮಾ ಸೆಂಟರ್, ಕುಮಟಾದಲ್ಲಿ ಹೈಟೆಕ್ ಮೆಡಿಕಲ್ ಆಸ್ಪತ್ರೆಗೆ ಸ್ಥಳ ನೋಡಿದರೂ ರಾಜ್ಯ ಸರಕಾರ ಮುಂದುವರಿದಿಲ್ಲ. ಜನರ ಸಮಸ್ಯೆ ಮಾತ್ರ ನೀಗಿಲ್ಲ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಹೃದಯ ಕಾಯಿಲೆ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗೂ ಇಲ್ಲಿ ಸ್ಪಂದನೆ ಸಿಗದು. ತುರ್ತು ಚಿಕಿತ್ಸೆ ಮಾಡಿದರೂ ಮುಂದಿನ ಪ್ರಯಾಣ ಅನಿವಾರ‍್ಯವಾಗಿದೆ. ಜಿಲ್ಲೆಯಿಂದ ಎರಡ್ಮೂರು ಬಸ್ಸುಗಳ ಮೂಲಕ ಮಣಿಪಾಲ, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವದು ಅನಿವಾರ‍್ಯವಾಗಿದೆ ಎಂದರು.
ಪಾದಯಾತ್ರೆಯಲ್ಲಿ ರಾಜಕೀಯ ಉದ್ದೇಶವಿಲ್ಲ. ಜನರ ನೋವಿಗೆ ಧ್ವನಿಯಾಗುವ ಉದ್ದೇಶವಷ್ಟೇ. ಈ ಅಭಿಯಾನದಲ್ಲಿ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ಸಂಯೋಜನೆ ಮಾತ್ರ ನಾವು ಮಾಡುತ್ತಿದ್ದೇವೆ. ನವೆಂಬರ್ 2ಕ್ಕೆ ಪಾದಯಾತ್ರೆಯನ್ನು ದಕ್ಷಿಣ ಭಾರತದ ಶಕ್ತಿ ದೇವತೆ ಶಿರಸಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಆರಂಭಿಸುತ್ತೇವೆ. ಅಲ್ಲಿಂದ ನಿತ್ಯ 15-25 ಕಿಲೋಮೀಟರ್ ನಡೆದು ನವೆಂಬರ್ 9ಕ್ಕೆ ಕಾರವಾರ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ. ಆ ಮಾರ್ಗದ ಆಯಾ ಗ್ರಾಮ ಪಂಚಾಯ್ತಿಗಳು ವ್ಯಾಪ್ತಿಯ ಜನರು ನಮಗೆ ಮನದುಂಬಿದ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹಣ ಉಳ್ಳವರು ಎಲ್ಲಾದರೂ ಚಿಕಿತ್ಸೆ ಪಡೆಯಬಹುದು. ಆದರೆ, ಬಡವರಿಗೆ, ಸಾಮಾನ್ಯ ವರ್ಗದವರಿಗೆ ಸುಲಭದ, ಕಡಿಮೆ ದರದ ಉನ್ನತ ಚಿಕಿತ್ಸೆ ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ಮಾತ್ರ ಸಾಧ್ಯವಿದೆ. ಮೆಡಿಕಲ್ ಕಾಲೇಜು ಜೀವ ಉಳಿಸಲು ತಕ್ಷಣದ ಚಿಕಿತ್ಸೆ ಜೊತೆ ರೋಗಿಯ ಕಿಸೆಯ ಭಾರ ಕೂಡ ಕಡಿಮೆ ಮಾಡಲಿದೆ ಎಂದರು.
ಕೋಟಿ ಹಣ ಹೊಂದಾಣಿಸಿಕೊಡುವುದು ನನ್ನ ಕೆಲಸ: ಮಾರ್ಗಮಧ್ಯದಲ್ಲೇ ಅದೆಷ್ಟೋ ಜನ ಅಪಘಾತಗಳಲ್ಲಿ, ಗಂಭೀರ ಕಾಯಿಲೆಗಳಲ್ಲಿ ಅಸುನೀಗಿದ್ದಿದೆ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳಿಗೆ ನಮ್ಮವರು ಹೋಗುತ್ತಿರುವುದು ದುಃಖದ ವಿಷಯ. ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಇದಕ್ಕೆಲ್ಲ ಮೂಲ ಕಾರಣವೂ ಆಗಿದೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಮೊದಲು ಮೆಡಿಕಲ್ ಕಾಲೇಜು ಬರಬೇಕು. ಘಟ್ಟದ ಮೇಲೆ, ಕರಾವಳಿಯ ಮಧ್ಯವರ್ತಿ ಸ್ಥಳದಲ್ಲಿ ಮೆಡಿಕಲ್ ಕಾಲೇಜುಗಳಾಗಬೇಕು. ಹಾಗಿದ್ದಲ್ಲಿ ಕನಿಷ್ಠ 50 ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇವೆಗೆ ದೊರೆಯುತ್ತಾರೆ. ಸರ್ಕಾರಕ್ಕೆ ಸರ್ಕಾರಿ ಆಸ್ಪತ್ರೆ ಮಾಡಲು ಆಗಲ್ಲವೆಂದರೆ, ಇಂಡಸ್ಟ್ರಿಯಲ್ ಏರಿಯಾಗಳಿಗೆ ಕೆಐಡಿಬಿ ಜಾಗ ನೀಡುವಂತೆ ಸರ್ಕಾರದವರು ಜಿಲ್ಲೆಯಲ್ಲಿ ಜಾಗ ಹಾಗೂ ಮೂಲಸೌಕರ್ಯ, ಅನುಮತಿ ನೀಡಿದರೆ ಅದಕ್ಕೆ ಬೇಕಾಗುವ ಅನುದಾನದ ಕ್ರೋಢೀಕರಣ ನಾನು ಮಾಡುತ್ತೇನೆ ಎಂದು ಹೇಳಿದರು.
ಪ್ರತಿ ಕಂಪನಿಗಳಲ್ಲೂ 2% ಸಿಎಸ್‌ಆರ್ ಫಂಡ್ ಇರುತ್ತವೆ. ಎಂಎನ್‌ಸಿ ಕಂಪನಿಗಳ ಜೊತೆಗೆ ನನಗೆ ಸಂಪರ್ಕವಿದೆ. 500 ಕೋಟಿಯನ್ನ ನಾನು ಸಂಗ್ರಹಿಸಿ ಕೊಡುತ್ತೇನೆ. ಆದರೆ ಜಾಗ, ಮೂಲಸೌಕರ್ಯ ನೀಡಲು ಜಿಲ್ಲಾಡಳಿತ, ಸರ್ಕಾರ ಮುಂದಾಗಲಿ. ಸತ್ತ ಮೇಲೂ ದುಡ್ಡು ಪೀಕುವಂತ ಕಮರ್ಷಿಯಲ್ ಆಸ್ಪತ್ರೆಗಳು ನಮಗೆ ಬೇಡ. ಯಾವುದಾದರೂ ಟ್ರಸ್ಟ್ನಡಿ ನಡೆಸುವ ಆಸ್ಪತ್ರೆ ನಮ್ಮಲ್ಲಿ ನಿರ್ಮಾಣವಾಗಬೇಕಿದೆ ಎಂದರು.