ಕಾರವಾರ : ಮುಸ್ಲೀಂ ಸಮುದಾಯದ ಕುಟುಂಬವೊಂದು ಇದೇ ಮೊದಲ ಬಾರಿಗೆ ಪಿತೃಕಾರ್ಯ ಮಾಡಿದ್ದು, ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆದ ಈ ಕಾರ್ಯ ವಿಶೇಷ ಸುದ್ದಿಯಾಗುತ್ತಿದೆ. ಮುಸ್ಲೀಂ ಕುಟುಂಬವೊಂದು 2 ದಿನಗಳ ಹಿಂದೆ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದ ಘಟನೆ ನಡೆದಿದೆ.
ಕಟ್ಟಿಗೆ ಕೆಲಸ ಮಾಡುವ ಕುಟುಂಬವೊಂದು ಧಾರವಾಡದ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ಇಲ್ಲಿಯ ಪಿತೃಶಾಲೆಯಲ್ಲಿ ಪೂರೈಸಿದ್ದಾರೆ. ಧಾರವಾಡದ ಧಾನೇಶ್ವರಿ ನಗರದ ಶಂಸಾದ್ ಕುಟುಂಬವು ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹೀಗಾಗಿ ಮೊದಲಿಂದಲೂ ಹಿಂದು ಸಂಪ್ರದಾಯಗಳನ್ನ ಪಾಲನೆ ಮಾಡುತ್ತಾ ಬಂದಿದ್ದಾರೆ.. ಇನ್ನು ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಈ ಕುಟುಂಬ ಹೆಚ್ಚು ಒಡನಾಟಿ ಇಟ್ಟುಕೊಂಡು ಬೆಳೆದುಕೊಂಡು ಬಂದಿದೆ ಅಂತೆ. ಇನ್ನು ಶಂಸಾದ್ರ ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಕೂಡಿ ಬರುತ್ತಿರಲಿಲ್ಲ ಅಂತಾ ಹೆಣ್ಣು ಸಿಕ್ಕಿಲ್ಲ ಅಂತಾ ಜ್ಯೋತಿಷಿಯ ಮೊರೆ ಹೋಗಿದ್ದರಂತೆ ಆಗ ಅವರು ಶಂಸಾದ್ರ ಅಜ್ಜ ಹುಸೇನ್ ಸಾಬ್ ಸತ್ತು ಹಲವು ವರ್ಷಗಳಾದರು ಅವರ ಆತ್ಮಕ್ಕೆ ಇನ್ನು ಶಾಂತಿ ಸಿಕ್ಕಿಲ್ಲ. ಹೀಗಾಗಿ ನಿಮ್ಮ ಕುಟುಂಬಕ್ಕೆ ಕಾಡಾಟ ಶುರುವಾಗಿದೆ ನೀವು ಪೀತೃಪಿಂಡ್ ಕಾರ್ಯ ಮಾಡಿ ಅಂತಾ ತಿಳಿಸಿದ್ದರಂತೆ.. ಅದರಂತೆ ನಡೆದುಕೊಂಡ ಮೇಲೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉಧ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ಧೇಶದಿಂದ ಈ ಕಾರ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಜ್ಯೋತಿಷಿಯು ತೋರಿಸಿದ ಮಾರ್ಗದರ್ಶನದಂತೆ ಗೋಕಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ವೇ. ನಾಗರಾಜ ಭಟ್ಟ ಗುರುಲಿಂಗ ಹಾಗೂ ವೇ. ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಗೋಕರ್ಣದಲ್ಲಿ ಕ್ರಿಸ್ಚನ್ ಸಮುದಾಯದವರು ( ಗೋವಾ ಮತ್ತು ವಿದೇಶಿಗರು ) ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲೀಂ ಸಮುದಾಯದ ಕುಟುಂಬ ಇದೇ ಮೊದಲ ಬಾರಿಗೆ ಪಿತೃ ಕಾರ್ಯ ನೆರವೇರಿಸಿದೆ.