ಅರುಣಾಚಲ ಪ್ರದೇಶ: ಚೀನಾದ ಆಕ್ರಮಣಕಾರಿ ಕ್ರಮಗಳ ವಿರುದ್ಧ ಆಕ್ರೋಶ ಹೊರಹಾಕಿದ ಅರುಣಾಚಲ ಪ್ರದೇಶದ ಗಡಿಭಾಗದ ಗ್ರಾಮಗಳ ನಿವಾಸಿಗಳು ರಾಜ್ಯವು ಶಾಶ್ವತವಾಗಿ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಚೀನಾವು ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ‘ಸ್ಟ್ಯಾಂಡರ್ಡ್ ಮ್ಯಾಪ್’ ಅನ್ನು ಬಿಡುಗಡೆ ಮಾಡಿತು.
ಇದರ ವಿರುದ್ಧ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿದ ಗ್ರಾಮಸ್ಥರು, ತವಾಂಗ್ ಸೆಕ್ಟರ್‌ಗೆ ಒಳಪಡುವ ಸೆಂಗ್ನಪ್, ಖಾರ್ಸೆನೆಂಗ್ ಮತ್ತು ಗ್ರಿಂಗ್‌ಖಾ ಗ್ರಾಮಗಳ ಗ್ರಾಮಸ್ಥರು ತಾವು ಶಾಂತಿಯುತ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಭಾರತೀಯ ಸೇನೆ ಮತ್ತು ಪ್ರಸ್ತುತ ಸರ್ಕಾರದಿಂದಾಗಿ ತಾವು ಸುರಕ್ಷಿತರಾಗಿದ್ದೇವೆ ಎಂದರು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ಪೆಮಾ ಖಂಡು ನೇತೃತ್ವದ ಅರುಣಾಚಲ ಪ್ರದೇಶ ಸರ್ಕಾರವು ಗಡಿ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಖಾರ್ಸೆನೆಂಗ್ ಪ್ರದೇಶದ ಗ್ರಾಮಸ್ಥರು ಮೋದಿ ಕಾರ್ಯವನ್ನು ಶ್ಲಾಘಿಸಿದರು. ಈ ಹಿಂದೆ ನಮ್ಮ ಭಾಗದಲ್ಲಿ ರಸ್ತೆ ಹದಗೆಟ್ಟಿತ್ತು, ಆದರೆ ಈಗಿನ ಸರ್ಕಾರ ನಮ್ಮ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮಾಡಿದ್ದು, ಗ್ರಾಮಸ್ಥರಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ನಮ್ಮ ಗ್ರಾಮದ ಬಹುತೇಕ ಜನರು ರೈತರಾಗಿದ್ದು, ಸರ್ಕಾರದಿಂದ ನೆರವು ನೀಡಲಾಗಿದೆ. ರೈತರಿಗೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮಾಡಿದ ಕೆಲಸಗಳಿಂದ ನಾವು ಸಂತೋಷವಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
“ನಾವು ಭಾರತೀಯ ಸೇನೆ ಮತ್ತು ಸರ್ಕಾರದ ಜೊತೆಗಿದ್ದೇವೆ, ಅರುಣಾಚಲ ಪ್ರದೇಶವನ್ನು ಚೀನಾ ತನ್ನ ಭಾಗವೆಂದು ಹೇಳಿದರೂ ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ, ನಾವು ಚೀನಾಕ್ಕೆ ತಲೆಬಾಗುವುದಿಲ್ಲ, ಬೇಕಾದರೆ ನಾವು ಭಾರತೀಯ ಸೇನೆಯೊಂದಿಗೆ ಹೋರಾಡುತ್ತೇವೆ” ಎಂದರು.