ಶಿರಸಿ: ಭಾರತದ ಮೇಲೆ ಆಕ್ರಮಣ ನಡೆದಾಗಲೂ ಹಿಂದೂ ಧರ್ಮ ಉಳಿದಿದೆ. ಹಿಂದೂ ಧರ್ಮದ್ದು ಸೋಲಿನ ಇತಿಹಾಸವಲ್ಲ ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತಿಳಿಸುವುದು ಅಗ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಹಮ್ಮಿಕೊಂಡ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಹಿಂದೂ ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದಾಗಲೂ ಧರ್ಮವೂ ಈ ನೆಲದಲ್ಲಿ ನೆಲೆಯೂರಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನೂ ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇಸ್ಲಾಂ, ಕ್ರೈಸ್ತರ ದಾಳಿಯನ್ನು ಹಿರಿಯರು ಶೌರ್ಯ ಮತ್ತು ತ್ಯಾಗದ ಮೂಲಕ ಎದುರಿಸಿದ್ದಾರೆ. ಈಗ ಹಿಂದೂ ಸಮಾಜದ ಯುವಕರನ್ನು ಬಡಿದೆಬ್ಬಿಸಲು ಶೌರ್ಯ ಜಾಗರಣ ರಥ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಜಗತ್ತಿನಲ್ಲಿ ಹಿಂದೂಗಳಿಗೆ ಉಳಿದಿರುವುದು ಭಾರತ ಮಾತ್ರ.
ದೇಶ ಹಿಂದೂಸ್ತಾನವಾಗಬೇಕು. ವಿಹಿಂಪ ಸ್ಥಾಪನೆಯಾಗಿ ಅರವತ್ತು ವರ್ಷ ಹಾಗೂ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಅ.12ರಂದು ಶಿರಸಿಯಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ಜಡೆ ಸಂಸ್ಥಾನ ಮಠದ ಮ.ನಿ.ಪ್ರ ಶ್ರೀ ಡಾ. ಮಹಾಂತ ಮಹಾಸ್ವಾಮಿಜೀ ಶೌರ್ಯ ಜಾಗರಣ ರಥಯಾತ್ರೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿ, ಆಶೀರ್ವಚನ ನೀಡುತ್ತ, ನಾವೆಲ್ಲರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮಲ್ಲಿ ಮೂಡಬೇಕಾಗಿದೆ ಎಂದರು.
ಪಟ್ಟಣದಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ಯುಗಾದಿ ಉತ್ಸವ ಸಮಿತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸದ ಸದಸ್ಯರು, ಸಾರ್ವಜನಿಕರು ಪೂರ್ಣ ಕುಂಭದೊಂದಿಗೆ ಪುಷ್ಪಾರ್ಚನೆ, ಹಣ್ಣು ಕಾಯಿ ಅರ್ಪಿಸಿ ಸ್ವಾಗತಿಸಿದರು.
ರಾಜಬೀದಿಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಶ್ರೀ ಮಧುಕೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥಯಾತ್ರೆ ಮಧುರವಳ್ಳಿ, ಗುಡ್ನಾಪೂರ, ಈಡೂರ ಮಾರ್ಗವಾಗಿ ಸಿದ್ದಾಪೂರ ತಲುಪಿತು.
ಹಿರಿಯರಾದ ಟಿ.ಜಿ. ನಾಡಿಗೇರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಗಣೇಶ್ ತೆಕ್ಕಟ್ಟೆ, ವಿಹಿಂಪ ಶಿರಸಿ ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ, ಕಾರ್ಯದರ್ಶಿ ಗಣಪತಿ ಭಟ್, ಶೌರ್ಯ ಜಾಗರಣ ರಥಯಾತ್ರೆ ವಿಭಾಗ ಪ್ರಮುಖ ಅಮೀತ ಶೇಟ್, ತಾಲ್ಲೂಕು ರಥ ಪ್ರಮುಖ ರಘು ನಾಯ್ಕ್, ರವೀಶ್ ಹೆಗಡೆ, ಅರವಿಂದ ಬಳೆಗಾರ, ಸುಧೀರ್ ನಾಯರ್ ಸೇರಿದಂತೆ ಇತರರಿದ್ದರು.