ಶಿರಸಿ: ಇಲ್ಲಿನ ನಟರಾಜ ನೃತ್ಯ ಶಾಲೆಯ ಪಾಲಕ ಹಾಗೂ ಅಭಿಮಾನಿ ವೃಂದ ಅರ್ಪಿಸುವ ಭಾಗ್ವತ್ ಕಲಾ ಸಂಭ್ರಮದ ನಿಮಿತ್ತ ‘ಗೀತ ನೃತ್ಯ ನಮನ’ ಅ.1ರಂದು ಸಂಜೆ 5 ಘಂಟೆಗೆ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಜರುಗಲಿದೆ ಎಂದು ಸಂಘಟನೆಯ ಮಮತಾ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಟರಾಜ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಯಲಿನ್ ನಲ್ಲಿ ವಿದ್ವಾನ್ ಶ್ರೀಕಾಂತ ಮೈಸೂರು, ಮೃದಂಗದಲ್ಲಿ ವಿದ್ವಾನ್ ಪುರುಷೋತ್ತಮ ಬೆಂಗಳೂರು ಸಾಥ್ ನೀಡಲಿದ್ದಾರೆ ಎಂದರು.
ಸೂರ್ಯರಾವ್ ಅವರ ದಿ ಅನ್ ಟೋಲ್ಡ್ ಸ್ಟೋರಿ ಆಫ್ ದಿ 11 ಹೆಡ್ ರಾವಣ ಸೋಲೋ ನೃತ್ಯ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದೆ ಎಂದರು. ಪ್ರದೀಪ ಭಾಗ್ವತ್ ಹೆಸರಿನಲ್ಲಿ ಸುಂದರ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿ, ಪಾಲಕರೆಲ್ಲರೂ ಸೇರಿ ಗೀತ ನೃತ್ಯ ನಮನ ಆಯೋಜಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ನಟರಾಜ ನೃತ್ಯ ಶಾಲೆಯ ಮುಖ್ಯಸ್ಥೆ ಸೀಮಾ ಭಾಗ್ವತ್, ಸಂಘಟನೆಯ ಪ್ರಮುಖರಾದ ಆಶಾ ಪೈ, ನೀಲಂ ಸಾಲೇರ, ಮೈತ್ರಿ ಹೆಗಡೆ, ಗಿರಿಧರ ಕಬ್ನಳ್ಳಿ ಇನ್ನಿತರರು ಇದ್ದರು.