ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ವೈಜ್ಞಾನಿಕ ಆವಿಷ್ಕಾರದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಹಾವಗಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರದ ಪ್ರಾಯೋಗಿಕ ಜ್ಞಾನವನ್ನು ನೀಡಿದರು. ನ್ಯೂಟನ್‌ನ ಚಲನೆಯ ನಿಯಮ, ಗ್ರಹಗಳ ಪರಿಚಲನೆ, ಗುರುತ್ವಾಕರ್ಷಣೆ, ಚಲನ ಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ, ಅಪಘಾತಗಳ ತಡೆಗಟ್ಟುವಿಕೆ ಕುರಿತು ಪ್ರಾಯೋಗಗಳ ಪ್ರಸ್ತುತ ಪಡಿಸಿ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ ವೈಜ್ಞಾನಿಕ ಪರಿಕಲ್ಪನೆಯನ್ನು ಮನದಟ್ಟು ಮಾಡಿದರು. ಕಾಲೇಜು ವಿದ್ಯಾರ್ಥಿಗಳ ಇಂತಹ ಸೃಜನಾತ್ಮಕ ಪ್ರಾಯೋಗಿಕ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳ ಕಲಿಕೆ ಸಹಕಾರಿಯಾಗುವುದು ಎಂದು ಮುಖ್ಯೋಪಾಧ್ಯಾಯ ಬಿ.ಎನ್.ಬಂಡೀವಾಡ ಹೇಳಿದರು.
ಎನ್‌ಎಸ್‌ಎಸ್ ವಿಭಾಗದ ಸಂಚಾಲಕ ಪ್ರೊ.ಸಂತೋಷ್ ಸವಣೂರ್, ಉನ್ನತ ಭಾರತ ಅಭಿಯಾನದ ಸಂಚಾಲಕ ಪ್ರೊ.ರಾಕೇಶ್ ಪಾಟೀಲ್ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಹಾವಿದ್ಯಾಲಯದ 12ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಕರಾಗಿ ಶಾಲಾ ಮಕ್ಕಳಿಗೆ ವೈಜ್ಞಾನಿಕ ಜ್ಞಾನ ನೀಡಿದರು ಎಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.