ಯಲ್ಲಾಪುರ: ಸಾಂಸ್ಕೃತಿಕ ಪರಿಸರ ಕಟ್ಟುವಲ್ಲಿ ಸಮಾಜದ ಪಾತ್ರ ಹಿರಿದು. ಉತ್ಸವ, ಆರಾಧನೆಗಳು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸಮಾಡುತ್ತದೆ. ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಬದುಕಿನ ಭಾಗವಾಗಿ ಸಾಂಸ್ಕೃತಿಕತೆ ಒಳಗೊಂಡಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ರಂಗಕರ್ಮಿ ರತ್ನಾಕರ ಹೆಬ್ಬಾರ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ 33ನೇ ಗಜಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಲಾವಿದ ನಾರಾಯಣ ಭಟ್ಟ ಹೊಸ್ತೋಟ ಮಾತನಾಡಿ ಸಾಹಸಮಯವಾದ ಪೌರಾಣಿಕ ನಾಟಕ ಪ್ರದರ್ಶನಗಳು ಇಂದು ಅಪರೂಪವಾಗುತ್ತಿದೆ. ಇಂತಹ ರಂಗ ಸಾಧ್ಯತೆಗಳನ್ನು ಅಳವಡಿಸಿದ ಸತ್ಯ ಹರಿಶ್ಚಂದ್ರ ನಾಟಕದ ಪ್ರದರ್ಶನ ಯಶಸ್ವಿಯಾದ ಕೃತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬರಹಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಾಂಸ್ಕೃತಿಕತೆ ಇನ್ನೂ ತನ್ನ ಮೌಲ್ಯ ಉಳಿಸಿಕೊಂಡು ಜೀವಂತವಾಗಿದೆ. ಈ ನೆಲದ ದೇಸಿತನ ಸೊಗಡು ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಸಂಘಟನೆಗಳು ಪಾತ್ರ ಹಿರಿದಾದುದು. ಆಧುನಿಕತೆಯ ಆಕರ್ಷಣೆಗಳು ನಮ್ಮ ಬದುಕನ್ನು ವ್ಯಾಪಾರೀಕರಣ ಮಾಡುತ್ತಿರುವ ಬಗ್ಗೆ ವಿಷಾದವಿದೆ ಎಂದರು.
ಇದೇ ಸಂದರ್ಭದಲ್ಲಿ ಹವ್ಯಾಸಿ ಬರಹಗಾರರಾದ ನರಸಿಂಹ ಹೆಬ್ಬಾರ ಹಳ್ಳಳ್ಳಿ ಹಾಗೂ ಅಲಂಕಾರ ಶಾಸ್ತ್ರದಲ್ಲಿ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದ ನಾಗರಾಜ ಭಟ್ಟ ಸಿದ್ರಮನೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಟಕ ಕೃತಿಕಾರ ರಂಗಭೂಮಿ ಕಲಾವಿದ ರಾಜಾರಾಮ ಗಾಂವ್ಕರ ಸ್ವಾಗತಿಸಿದರು. ಎಸ್ ವಿ ಭಟ್ಟ ವಂದಿಸಿದರು. ಪುರುಷರಿಗಾಗಿ ಹಗ್ಗ ಜಗ್ಗಾಟ, ಮಹಿಳೆಯರಿಗಾಗಿ ಸಂಗೀತ ಕುರ್ಚಿ, ರಂಗೋಲಿ, ತಿಂಡಿ ತಿನಿಸು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಸ್ಥಳೀಯ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಹಿರಿಯ ಕಲಾವಿದ ಪಿ.ಕೆ.ಭಟ್ಟ, ವಿ.ಪಿ.ಹೆಬ್ಬಾರ, ಯುವತಿ ಮಂಡಳದ ಅಧ್ಯಕ್ಷೆ ಹಾಗೂ ಕವಯಿತ್ರಿ ಸೀತಾ ಭಟ್ಟ, ಕೃಷಿಕ ವಿಘ್ನೇಶ್ವರ ಭಟ್ಟ, ಪಂಚಾಯಿತಿ ಸದಸ್ಯ ರಾಘವೇಂದ್ರ ಕುಣಬಿ, ಗಜಾನೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಭಟ್ಟ ಉಪಸ್ಥಿತರಿದ್ದರು.