ಸಿದ್ದಾಪುರ: ಸಾಧಕರನ್ನು ಗುರುತಿಸಿ ಗೌರವಿಸದಿದ್ದರೆ ಸಾಧನೆಯ ಮಾರ್ಗವನ್ನು ಅರಸುವವರ ಸಂಖ್ಯೆ ವಿರಳವಾಗುತ್ತದೆ. ಆದ್ದರಿಂದ ಸಮಾಜದಲ್ಲಿರುವ ಸಾಧಕರನ್ನು ಗುರುತಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಪತ್ರಕರ್ತ ರಾಘವೇಂದ್ರ ಹೆಗಡೆ ಬೆಟ್ಟಕೊಪ್ಪ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಸುಷಿರ ಸಂಗೀತ ಪರಿವಾರದ ವತಿಯಿಂದ ದೇವಾಲಯದ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆದ ಭಜಭುವನೇಶ್ವರಿ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅತಿಥಿಗಳಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಭಾಂಸುರಿ ವಾದಕರು ಮತ್ತು ವಿದ್ವಾಂಸರಾದ ಶಂಭು ಭಟ್ಟ ಕಡತೋಕಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಗೌರವ ಸನ್ಮಾನಕ್ಕೆ ಭಾಜನರಾದ ಶಂಭು ಭಟ್ಟರ ಕುರಿತು ವಿ. ದತ್ತಮೂರ್ತಿ ಭಟ್ ಅಭಿನಂದನಾ ನುಡಿಗಳನ್ನಾಡಿದರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದೋನ್ನತಿ ಹೊಂದಿ ವರ್ಗಾಣೆಗೊಂಡಿರುವ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ತಿಮ್ಮಯ್ಯ ಜಿ ಇವರನ್ನು ದೇವಾಲಯದ ವತಿಯಿಂದ ಗೌರವಿಸಲಾಯಿತು. ಪ್ರಶಾಂತ ಹೆಗಡೆ ಕಾಶಿಗದ್ದೆ ನಿರೂಪಿಸಿದರು. ಜಯಪ್ರಕಾಶ ಭಟ್ಟ ಮುತ್ತಿಗೆ ಸ್ವಾಗತಿಸಿದರು. ಶ್ರೀಕಾಂತ ಭಟ್ಟ ಮುತ್ತಿಗೆ ವಂದಿಸಿದರು.