ಸಿದ್ದಾಪುರ: ತಾಲ್ಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡಳ್ಳಿಯಿಂದ-ಕೋಡಿಗದ್ದೆ ಮಾರ್ಗದ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಬಿಳೆಗೋಡ- ಉಡಳ್ಳಿ ಗ್ರಾಮದೇವ ಕರೆ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿದರು.
ತಾಲ್ಲೂಕಿನ ವಂದಾನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಭೇಟಿಯಾದ ಸಂಘದ ಪದಾಧಿಕಾರಿಗಳು ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯ ಚಿಂಗೋಳಿಮಕ್ಕಿ ಕ್ರಾಸ್ ನಿಂದ ಬಿರ್ಲಮಕ್ಕಿ-ಕೊಡಿಗದ್ದೆ ರಸ್ತೆಯ ಬಿಳಂತಿ ಕ್ರಾಸ್ ವರೆಗೆ ಸುಮಾರು 3.5 ಕಿ.ಮೀ. ಕಚ್ಚಾ ರಸ್ತೆ ಇದ್ದು, ಈ ರಸ್ಥೆ ಅಭಿವೃದ್ಧಿ ಪಡಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹೀಗೆ ರಸ್ತೆ ಅಭಿವೃದ್ದಿಪಡಿಸುವುದರಿಂದ ಮುಂದಿನ ದಿನಗಳಲ್ಲಿ ಸಿದ್ದಾಪುರದಿಂದ ಬಿರ್ಲಮಕ್ಕಿ ಮಾರ್ಗವಾಗಿ ಕೋಡಿಗದ್ದೆಗೆ ಸಂಚರಿಸುವ ಬಸ್ ವ್ಯವಸ್ಥೆಯನ್ನು ಪ್ರಸ್ತುತ ಅಭಿವೃದ್ಧಿಪಡಿಸಬೇಕಿರುವ ರಸ್ತೆ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಲ್ಲಿ ಸಾವಲಗದ್ದೆ, ಗಿಜಗುಣಿ, ಚಿಂಗೋಳಿಮಕ್ಕಿ, ಉಡಳ್ಳಿ, ನಿಡಿಕುಣಿ, ಜಕ್ಕಾರ ಹೀಗೆ 10 ಕ್ಕೂ ಹೆಚ್ಚು ಊರುಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಇದರಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ಸಹಕಾರಿಯಾಗುವುದರ ಜೊತೆಗೆ ಸಾರಿಗೆ ಇಲಾಖೆಗೂ ಹೆಚ್ಚಿನ ಆದಾಯ ಸಿಗಲಿದೆ. ಆದ್ದರಿಂದ ಕೂಡಲೇ ರಸ್ತೆ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಸಂಘದ ಅಧ್ಯಕ್ಷ ಗೋವಿಂದ ಗೌಡ, ದ್ಯಾವ ಗೌಡ, ಅಮ್ಮು ಗೌಡ, ಅಣ್ಣಪ್ಪ ಗೌಡ, ಕಮಲಾಕರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.