ಸಿದ್ದಾಪುರ: ರಾಜ್ಯದಲ್ಲಿ ಕಳೆದ 4 ತಿಂಗಳಿoದ ಆಢಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಕುರಿತು ಜನತೆಯಲ್ಲಿ ಭ್ರಮನಿರಸನ ಕಂಡುಬರುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಮುಂದಿಟ್ಟು ಅಭಿವೃದ್ಧಿ, ಜನಹಿತ ಕಾರ್ಯಗಳನ್ನು ಸರಕಾರ ನಿರ್ಲಕ್ಷಿಸಿದೆ. ಪ್ರತಿ ಹಂತದಲ್ಲೂ ಆಡಳಿತ ವೈಫಲ್ಯ, ಗೊಂದಲ ಎದ್ದು ಕಾಣುತ್ತಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಲೂಕಿನಲ್ಲೂ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಿದೆ. ಪಟ್ಟಣಕ್ಕೆ ಕುಡಿಯುವ ನೀರು, ಬಸ್ ಡಿಪೋ, ಸ್ವಾತಂತ್ರ್ಯ ಯೋಧರ ಉದ್ಯಾನವನ ಮುಂತಾದ ಕಾಮಗಾರಿಗಳಿಗೆ ಮಂಜೂರಾತಿ ಸಿಗಬೇಕಿದೆ. ತಾಲೂಕಿನಲ್ಲಿ ಅಧಿಕಾರಿಗಳು ಮುಕ್ತವಾಗಿ ಆಡಳಿತ ನಡೆಸುವ ಸ್ಥಿತಿ ಇಲ್ಲ. ಭಯದ ವಾತಾವರಣದಲ್ಲಿ ಅವರು ಕೆಲಸ ಮಾಡಬೇಕಿದೆ. ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಧಿಕಾರಿಗಳು ಜವಾಬ್ದಾರಿಯಿಂದ, ಮುಕ್ತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಜನರ ಧ್ವನಿಯಾಗಿ, ಪ್ರತಿಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಜನರ ನಿರೀಕ್ಷೆಯಂತೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸುತ್ತೇವೆ. ಜನರ ತೀರ್ಮಾನವನ್ನು ಸರಕಾರ ಬದ್ದತೆಯಿಂದ ನಿರ್ವಹಿಸಬೇಕು. ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯ ಮಾನದಂಡವಾಗಬೇಕು ಎಂದರು.
ಲೋಕಸಭಾ ಚುನಾವಣೆಗೆ ಅಗತ್ಯವಾದ ಸಿದ್ಧತೆಗಳನ್ನು ನಾವು ಮಾಡುತ್ತಿದ್ದೇವೆ. ವರಿಷ್ಠರು ತೆಗೆದುಕೊಂಡ ತೀರ್ಮಾನವನ್ನು ನಾವೆಲ್ಲ ಪಾಲಿಸುತ್ತೇವೆ. ಅದು ನಮ್ಮ ಜವಾಬ್ದಾರಿ. ಕಮಲದ ಹೂ ನಮ್ಮ ಅಭ್ಯರ್ಥಿ ಎಂದ ವಿಶ್ವೇಶ್ವರ ಹೆಗಡೆ ಪಕ್ಷವಿರೋಧಿ ಚಟುವಟಿಕೆ ಕುರಿತಂತೆ ನಾನು, ಮಂಡಲ ಮತ್ತು ಜಿಲ್ಲಾ ಸಮತಿ ನೀಡಿದ ಮಾಹಿತಿಯನ್ನು ರಾಜ್ಯ ಶಿಸ್ತು ಸಮಿತಿ ಪರಿಶೀಲಿಸಿ ನಿರ್ಣಯ ತೆಗೆದುಕೊಂಡಿದೆ. ಅದನ್ನು ಗೌರವಿಸಬೇಕು. ಪಕ್ಷದ ಒಳಿತಿಗಾಗಿ ಪಕ್ಷದ ಕೆಲಸ ನಾವೆಲ್ಲ ಮಾಡಬೇಕು ಎಂದ ಅವರು ಶಿವರಾಮ ಹೆಬ್ಬಾರ ಪಕ್ಷ ಬಿಟ್ಟು ಹೋಗೋದಿಲ್ಲ. ನಮ್ಮ ಜೊತೆಗೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.