ಕಾರವಾರ: ನಗರಸಭೆಯ ಮಿಕ್ಕುಳಿದ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸುವಂತೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
2015ರಲ್ಲಿ ಕಾರವಾರದ 34 ಪೌರಕಾರ್ಮಿಕರ ಪೈಕಿ 15 ಮಂದಿಗೆ ಇಲ್ಲಿನ ಪಂಚರಷಿವಾಡದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಏಳು ವರ್ಷ ಕಳೆದರೂ ಇನ್ನುಳಿದ 18 ಕಾರ್ಮಿಕರಿಗೆ ಈವರೆಗೆ ವಸತಿಗೃಹಗಳನ್ನು ಗುರುತು ಮಾಡಿಲ್ಲ. ಹೀಗಾಗಿ ನಗರಸಭೆಯ ಕ್ವಾಟ್ರಸ್ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಬಾಡಿಗೆ ಪಾವತಿಸಬೇಕಿದೆ. ಇದರಿಂದಾಗಿ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ವಸತಿ ಸೌಲಭ್ಯದಿಂದ ವಂಚಿತರಾದ ಪೌರಕಾರ್ಮಿಕರಲ್ಲಿ ಕೆಲವರು ನಿವೃತ್ತರಾಗಿದ್ದಾರೆ. ಜತೆಗೆ ಇನ್ನು ಕೆಲವರು ನಿವೃತ್ತಿ ಹೊಂದಲಿದ್ದಾರೆ ಹೀಗಾಗಿ ಶೀಘ್ರವೇ ವಸತಿ ಸೌಲಭ್ಯ ಒದಗಿಸಬೇಕು. ಅಲ್ಲಿಯವರೆಗೆ ನಗರಸಭೆಯ ಕ್ವಾಟ್ರಸ್ನ ಮನೆ ಬಾಡಿಗೆ ಪಡೆಯಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾರಾಯಣ, ಖಜಾಂಚಿ ಪುರುಶೋತ್ತಮ, ಕಾರ್ಯದರ್ಶಿ ಶಂಕರ ಚಲವಾದಿ ಹಾಗೂ ಇತರರು ಇದ್ದರು.