ಶಿರಸಿ : ಜಿಲ್ಲಾ ಛೆಂಬರ್ ಆಫ್ ಕಾಮರ್ಸ್ ( ಡಿಸಿಸಿಐ ) ಮತ್ತು ಕೈಗಾರಿಕೆಗಳ ಸಂಸ್ಥೆಗಳ ರಾಜ್ಯ ಒಕ್ಕೂಟವು ( ಎಫ್.ಕೆ.ಸಿಸಿಐ ) ಸಾಧಕ ಉದ್ಯಮಿಗಳಿಗೆ ನೀಡುವ ರಾಜ್ಯಮಟ್ಟದ “ಉದ್ಯಮ ಉತ್ಕೃಷ್ಟತಾ ಸಾಧಕ ಪ್ರಶಸ್ತಿ”ಯನ್ನು ಇಲ್ಲಿನ ಸಾಮಾಜಿಕ ಮುಂದಾಳು ಹಾಗೂ ಉದ್ಯಮಿ ದೀಪಕ ಹೆಗಡೆ ದೊಡ್ಡೂರ್ ಅವರಿಗೆ ನೀಡಿ ಗೌರವಿಸಲಾಯಿತು.
ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ನಡೆದ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಸಮ್ಮೇಳನ ಅಧ್ಯಕ್ಷ ತ್ರಿವಿಕ್ರಮ ಜೋಶಿ , ಎಫ್.ಕೆ.ಸಿಸಿಐ ಯ ರಾಜ್ಯ ಅದ್ಯಕ್ಷ ಬಿ. ವಿ. ಗೋಪಾಲ ರೆಡ್ಡಿ, ಮುಂಬೈಯ ಪ್ರಖ್ಯಾತ ಉದ್ಯಮಿ ಭಾವನಾ ಷಾ, ರಾಯಚೂರು ಡಿಸಿಸಿಐ ಅಧ್ಯಕ್ಷ ಕಮಲ್ ಕುಮಾರ್ , ಹಿರಿಯ ಉದ್ಯಮಿಗಳು ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯಾದ್ಯಾಂತದಿಂದ ಬಂದ ಸಾವಿರಾರು ಹಲವು ಹಿರಿಯ ಉದ್ಯಮಿಗಳು ಹಾಗೂ ಡಿಸಿಸಿಐ ಪ್ರತಿನಿಧಿಗಳಾಗಿ ಬಂದವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾದರು. ಎಫ್.ಕೆ.ಸಿಸಿಐ ನಿರ್ದೇಶಕ ಶಿರಸಿಯ ಜಿ.ಜಿ. ಹೆಗಡೆ ಕಡೆಕೋಡಿ ಹಾಗೂ ಇತರ ಸದಸ್ಯರು ಸಹ ಇದಕ್ಕೆ ಸಾಕ್ಷಿಯಾದರು.
ಇನ್ನು ದೀಪಕ ಹೆಗಡೆ ದೊಡ್ಡೂರ್ ಅವರು ಉತ್ತರ ಕನ್ನಡ ಡಿಸಿಸಿಐಯ ಕ್ರಿಯಾಶೀಲ ಸದಸ್ಯರು ಹಾಗೂ ಸಾಧಕ ಉದ್ಯಮಶೀಲರು ಎಂಬುದು ಸಂತಸದ ಸಂಗತಿ. ಶಿರಸಿಯಲ್ಲಿ ಕಳೆದ ಒಂದೂವರೆ ದಶಕಗಳಿಂದ ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಅನುಪಮವಾದದ್ದು ಎಂದು ದೀಶಾ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.