ಕಾರವಾರ: ಹಿಂದೂ ಧರ್ಮ ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಎಲಿಷಾ ಎಲಕಪಾಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ದಲಿತ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಹೇಳಿಕೊಳ್ಳುವ ಎಲಿಷಾ ಎಲಕಪಾಟಿ ಹಿಂದೂ ಧರ್ಮ, ಹಿಂದೂ ದೇವತೆ ಮತ್ತು ವಾಲ್ಮೀಕಿ ಮಹರ್ಷಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುವುದರ ಜೊತೆಗೆ ಕೈಯಿಂದ ಅಶ್ಲೀಲ ಸನ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಹಿಂದೂ ಧರ್ಮಿಯರು, ಎಲಿಷಾ ಎಲಕಪಾಟಿ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹಿಂದೂ ಧರ್ಮದವರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದರ ಜೊತೆಗೆ ಅನ್ಯ ಧರ್ಮಕ್ಕೆ ಮತಾಂತರ ಮಾಡುವಂತೆ ಪ್ರಚೋದಿಸುವ ಮಾತುಗಳನ್ನು ಆಡಿರುವ ಎಲಿಷಾ ಎಲಕಪಾಟಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆ ಹೊರಟ ಹಿಂದೂಪರ ಕಾರ್ಯಕರ್ತರು, ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದರೂ ಕೆಲ ಹೊತ್ತು ಠಾಣೆಯ ಎದುರು ಪ್ರತಿಭಟನೆ ನಡೆಸಿ, ಎಲಿಷಾ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ, ಎಲಿಷಾರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಒತ್ತಾಯಿಸಿದರು.