ಶಿರಸಿ: ಹನೀಫಿ ಸುನ್ನಿ ಮರ್ಕಜ್ ಕಮಿಟಿ ಅಧ್ಯಕ್ಷ, ಮೊಹಮ್ಮದ್ ಇಕ್ಬಾಲ್ ಬಿಳಗಿ ಮತ್ತು ಸದಸ್ಯರ ನೇತೃತ್ವದಲ್ಲಿ ಸೆ,ಶುಕ್ರವಾರ ಶಿರಸಿಯ ಅಹಲೆ ಸುನ್ನತುಲ್ ಜಮಾತಿನ ಮುಸ್ಲಿಂ ಸಮುದಾಯದ ವತಿಯಿಂದ ಶಿರಸಿಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆಗಾಲ ಪ್ರಾರಂಭವಾದಾಗಿನಿಂದಲೂ ವಾಡಿಕೆಯಂತೆ ಮಳೆಯಾಗದ ಕಾರಣ, ಬರಗಾಲದ ವಾತಾವರಣ ಉದ್ಭವಾಗಿರುತ್ತದೆ. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ನೆಟ್ಟಿ ಮಾಡಲಾದ ಭತ್ತದ ಗದ್ದೆಗಳು ಬಿಸಿಲಿನ ತಾಪದಿಂದ ಸುಡುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಬರಬಹುದು. ಇಂದು ಜಗತ್ತಿನಲ್ಲಿ ಅನ್ಯಾಯ, ಮನುಷ್ಯ ಮನುಷ್ಯರ ಮಧ್ಯ ದ್ವೇಷ, ಅಸೂಯೆ, ಸುಳ್ಳು ಹಾಗೂ ಮೋಸತನ ಇರುವುದರಿಂದ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿದೆ. ದೇವರ ಅನುಗ್ರಹ ಇಲ್ಲದ ಕಾರಣ ಮಳೆಯೂ ಸಹ ಬರುತ್ತಿಲ್ಲ. ಇಂದು ನಮ್ಮ ಮೇಲೆ ದೇವರ ಅನುಗ್ರಹ ಇದೆ ಅಂದರೆ, ಏನೂ ಅರಿಯದ ಅದು ಮುಗ್ಧ ಮಕ್ಕಳ ಕಾರಣದಿಂದಾಗಿದೆ ಮತ್ತು ಈ ಸಂಸಾರದಲ್ಲಿ ವಾಸಿಸುತ್ತಿರುವ ಪಶು, ಪಕ್ಷಿ ಜೀವ ಜಂತುಗಳು ವ ಪ್ರಾಣಿಗಳ ಕಾರಣದಿಂದಾಗಿದೆ. ಆ ದೇವರು ನಮ್ಮೆಲ್ಲರ ಪಾಪಗಳನ್ನು ಮನ್ನಿಸಿ ನಮ್ಮ ಮೇಲೆ ಮಳೆಯನ್ನು ಸುರಿಸಲಿ. ನಮ್ಮ ಪ್ರಕೃತಿ ಸದಾ ನಿತ್ಯ ಹರಿದ್ವರ್ಣವಾಗಿರಲಿ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಮತ್ತು ಸಹಬಾಳ್ವೆಯ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿ ಮೌಲಾನಾ ಶಮೀಮುಲ್ ಖಾದ್ರಿ ದೇವರಲ್ಲಿ ದುವಾ (ಪ್ರಾರ್ಥನೆ) ಸಲ್ಲಿಸಿದರು. ಹಾಫೀಜ್ ಸಗೀರ ಅಹ್ಮದ ಮಳೆಗಾಗಿ ನಮಾಜ ನಿರ್ವಹಿಸಿದರು. ನೂರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಮಳೆಗಾಗಿ ನಮಾಜ ನಿರ್ವಹಿಸಿ ಪ್ರಾರ್ಥನೆ ಸಲ್ಲಿಸಿದರು.