ಗೋಕರ್ಣ: ನಾಗರ ಪಂಚಮಿಯ ನಿಮಿತ್ತವಾಗಿ ಇಲ್ಲಿಯ ಸುತ್ತಮುತ್ತಲಿನ ಹಲವು ನಾಗದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನಾಗತೀರ್ಥದಲ್ಲಿ ಸಾಕಷ್ಟು ನಾಗದೇವರಿದ್ದು, ಇಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆಯನ್ನು ಸಲ್ಲಿಸಿದರು. ನಾಗಬನದಲ್ಲಿ ನಾಗದೇವತೆಗೆ ಕೇದಿಗೆ ಹೂವು ಸೇರಿದಂತೆ ವಿವಿಧ ಹೂವುಗಳನ್ನು ಹಾಕಿ ಪೂಜೆ ಸಲ್ಲಿಸಲಾಯಿತು. ಆಯಾ ಗ್ರಾಮಗಳಲ್ಲಿ ಇರುವ ನಾಗದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಪಾತೋಳಿಯನ್ನು ಮಾಡಿ ಸೇವಿಸಿದರು.
ನಾಗೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಕೆ : ಇಲ್ಲಿನ ಪುರಾಣ ಪ್ರಸಿದ್ಧ ನಾಗೇಶ್ವರ ಮಂದಿರದಲ್ಲಿ ನಾಗರ ಪಂಚಮಿಯ ನಿಮಿತ್ತ ಸಾವಿರಾರು ಭಕ್ತರು ನಾಗೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಮುಂಜಾನೆಯಿ0ದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ನಾಗೇಶ್ವರ ಲಿಂಗಕ್ಕೆ ಹಾಲು ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಪ್ರತಿವರ್ಷ ಕೂಡ ಇಲ್ಲಿಗೆ ಸಾವಿರಾರು ಭಕ್ತರು ಹರಿದು ಬರುತ್ತಿದ್ದು, ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಕೇಳಿಕೊಳ್ಳುವ ಪದ್ಧತಿ ಇದೆ.