ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ, ಬಿಜಿಎಸ್ ಸೆಂಟ್ರಲ್ ಸ್ಕೂಲ್,ಮಿರ್ಜಾನಿನಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ , ಮಾಜಿ ಯೋಧ ಮಿಥುನ್ ಬಾಂದೇಕರ್ ಧ್ವಜಾರೋಹಣ ನೇರವೇರಿಸಿ, ತಾವು ಭಾರತೀಯ ಸೈನ್ಯ ಸೇರಿದ ಬಗ್ಗೆ ಮತ್ತು ದೇಶಪ್ರೇಮ, ಶಿಸ್ತಿನ ಬಗ್ಗೆ ತಮ್ಮ ಸ್ಪೂರ್ತಿದಾಯಕ ದೇಶಪೇಮದ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಆಡಳಿತ ಮಂಡಳಿ ಸದಸ್ಯ ಎಂ. ಟಿ. ಗೌಡ ನಾವು ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡಿದ್ದೆವು ಮತ್ತು ಹೇಗೆ ಅದನ್ನು ಪಡೆದೆವು? ನಮ್ಮ ಭವ್ಯ ಭಾರತದ ಸಂಸ್ಕೃತಿ, ಪರಂಪರೆ, ಸನಾತನ ಧರ್ಮ, ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ವಿವಿಧ ದೃಷ್ಟಾಂತಗಳ ಮೂಲಕ ಎಳೆಎಳೆಯಾಗಿ ವಿವರಿಸಿದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ನಿವೃತ್ತ ಪ್ರಾಂಶುಪಾಲ ಎಸ್. ಎನ್. ಭಟ್ ಮಾತನಾಡಿ ನಮ್ಮ ದೇಶ ಇಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ವಿದ್ಯಾರ್ಥಿಗಳಾದ ತಾವು ಚೆನ್ನಾಗಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ, ನೀವು ಕಲಿತ ಶಾಲೆಗೆ ಕೀರ್ತಿ ತನ್ನಿ ಎಂದು ಸ್ವಾತಂತ್ರ್ಯೋತ್ಸವಕ್ಕೆ ಶುಭ ಹಾರೈಸಿದರು. ಆಡಳಿತಾಧಿಕಾರಿ ಜಿ. ಮಂಜುನಾಥ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ವೀರ ಧೀರರ ಜೀವನ ಚರಿತ್ರೆಯ ಬಗ್ಗೆ ಚೈತನ್ಯದಾಯಕ ಮಾತನಾಡಿದರು. ಪ್ರಾಂಶುಪಾಲೆ ಶೀಮತಿ ಲೀನಾ ಎಂ. ಗೊನೇಹಳ್ಳಿಯವರು ನಮಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದೆ, ಸದುಪಯೋಗಪಡಿಸಿಕೊಂಡು ಇಂದಿನ ವಿದ್ಯಾರ್ಥಿಗಳೇ ಮುಂದಿನ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು. ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ 4 ತಂಡಗಳಾದ ಯುನಿಟಿ, ಪೀಸ್, ಕರೇಜ್ ಮತ್ತು ಸ್ಟ್ರೆಂಥ್ ತಂಡಗಳ ಪಥಸಂಚಲನದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಆಕರ್ಷಕ ಪಥಸಂಚಲನದ ಸ್ಪರ್ಧೆಯಲ್ಲಿ ಪೀಸ್ ತಂಡ ಪ್ರಥಮ ಮತ್ತು ಯುನಿಟಿ ತಂಡ ದ್ವಿತೀಯ, ಕರೇಜ್ ತಂಡ ತೃತೀಯ ಮತ್ತು ಸ್ಟರ್ ತಂಡ ಚತುರ್ಥ ಸ್ಥಾನ ಗಳಿಸಿದವು. ಕುಮಾರ ನಕುಲ್ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಕುಮಾರಿ ಸಮೃದ್ಧಿ, ಪೃಥ್ವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಅಭೀಜ್ಞಾ ಸ್ವಾಗತಿಸಿದಳು. ಸಂಜನಾ ಮತ್ತು ಸಂಗಡಿಗರು ವಂದೇಮಾತರಂ, ಧ್ವಜಗೀತೆ ಮತ್ತು ರೈತಗೀತೆ ಹಾಡಿದರು. ಕುಮಾರ ಅದ್ವಿತ್ ಎಂ. ಕೆ, ಕುಮಾರ ಆರವ್, ಕುಮಾರ ಅಭಿಮಾನ್, ಕುಮಾರ್ ಚಿರಾಗ್, ಕುಮಾರಿ ಸೃಷ್ಟಿ, ಕುಮಾರಿ ನಿಸರ್ಗ ಭಾಷಣ ಮಾಡಿದರು. ಕುಮಾರಿ ಹನಿ ಮತ್ತು ಸಂಗಡಿಗರು ದೇಶಭಕ್ತಿಗೀತೆ ಹಾಡಿದರು. ಕುಮಾರಿ ದಿಶಾ ಮತ್ತು ದಿಯಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಮಾನಸಿ ವಂದಿಸಿದಳು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಮತ್ತು ನೃತ್ಯ ಜನಮನಸೂರೆಗೊಂಡಿತು. ಅಲ್ಲದೇ ಕಿತ್ತೂರ ಚೆನ್ನಮ್ಮ, ನೆಹರು, ಗಾಂಧೀಜಿ, ಅಂಬೇಡ್ಕರ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಒನಕೆ ಓಬಬ್ವ, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಷ್, ನರೆಂದ್ರ ಮೋದಿ, ಇಂದಿರಾ ಗಾಂಧಿ ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ನಮ್ಮ ದೇಶದ ಪ್ರಧಾನಿಗಳ ವಿವಿಧ ವೇಷಭೂಷಗಳನ್ನು ತೊಟ್ಟ ಮುದ್ದು ಪುಟಾಣಿಗಳು ಎಲ್ಲರ ಕಣ್ಮನ ಸೆಳೆದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ, ವೈಭವ ಗಾಂವಕರ, ನಾಗರತ್ನ ನಾಯ್ಕ ಮತ್ತು ಎಲ್ಲಾ ತಂಡಗಳ ಶಿಕ್ಷಕರು ಪಥಸಂಚಲನಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.