ಶಿರಸಿ: ಜೀವನದಲ್ಲಿ ಸಮತ್ವ, ಸಂಯಮ, ಶಮ ಗುಣಗಳನ್ನು ಪಾಲಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಅವರು ಶಾಂತಪುರ ಸೀಮಾ ಹಾಗು ಮತ್ತಿಘಟ್ಟಾ ಭಾಗಿ ಶಿಷ್ಯರಿಂದ ಸೀಮಾಭಿಕ್ಷಾ ಸ್ವೀಕರಿಸಿ ಆಶೀರ್ವಚನ ನುಡಿದರು.
ಪ್ರತಿಯೊಬ್ಬರ ಬದುಕು ಸಾರ್ಥಕವಾಗಲು ಈ ಮೂರು ಆದರ್ಶ ಪಾಲಿಸಬೇಕು. ಕಷ್ಟ ಬಂದಾಗ ಕುಗ್ಗದೇ ಸಮತ್ವ ಇಟ್ಟುಕೊಳ್ಳಬೇಕು
ಅನುಕೂಲತೆ ಇದ್ದಾಗ ಗರ್ವ ಬಾರದಂತೆ ನೋಡಿಕೊಳ್ಳಬೇಕು.
ಇಂದ್ರಿಯ ನಿಗ್ರಹ ಮಾಡಿಕೊಳ್ಳಬೇಕು. ಶಮಾ, ಕ್ಷಮಾ ಗುಣ ಬೆಳೆಸಿಕೊಳ್ಳಬೇಕು. ಉದ್ವೇಗಕ್ಕೆ ಒಳಗಾಗಬಾರದು. ಆಗ ಮನಸ್ಸು, ಬದುಕು ಪರಮಾತ್ಮನ ಸಾಕ್ಷಾತ್ಕಾರ ಕಡೆಗೆ ಸಾಗುತ್ತದೆ. ಇದಕ್ಕೆ ಎಂಥ ಪಂಡಿತನಾದರೂ ನಾವು ಮಮಕಾರ ಬಿಡಬೇಕು. ಅದೇ ಜ್ಞಾನ ಎಂದರು.
ದೇವರ ಕಡೆಗೆ ಆಕರ್ಷಣೆ ಆದರೆ ಉಳಿದ ಆಕರ್ಷಣೆಯಿಂದ ಹೊರಗುಳಿಯಬಹುದು ಎಂದ ಶ್ರೀಗಳು, ಭಗವಂತನ ಮೇಲಿನ ಭಕ್ತಿ ಅನೇಕ ಸಾಧನೆಗಳಿಗೆ ಕಾರಣವಾಗುತ್ತದೆ ಎಂದೂ ಹೇಳಿದರು.
ಈ ವೇಳೆ ವಿಶ್ವನಾಥ ಹೆಗಡೆ ಶಿಗೇಹಳ್ಳಿ, ಶ್ರೀನಿವಾಸ ಹೆಗಡೆ ಬೆದೆಗದ್ದೆ, ಪುರುಷೋತ್ತಮ ಹೆಗಡೆ ಕಳಲೆಮಕ್ಕಿ, ಶ್ರೀಕಾಂತ ಹೆಗಡೆ ಕಡಬಾಳ ಇತರರು ಇದ್ದರು.