ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ, ವಿದ್ಯುದ್ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯವಾದರೂ ಚರಂಡಿಗೆ ಸ್ಲ್ಯಾಬ್ ಹಾಕಿ ಮುಚ್ಚುವುದು, ಡಿವೈಡರ್ ನಲ್ಲಿ ವಿದ್ಯುದ್ದೀಪ ಅಳವಡಿಸುವ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವಂತಾಗಿದೆ. ಹಬ್ಬುವಾಡ ರಸ್ತೆಯ ಡಿವೈಡರ್ನಲ್ಲಿ ವಿದ್ಯುತ್ ದೀಪ ಅಳವಡಿಸಲು ಒಟ್ಟೂ 3 ಕೋಟಿ ರೂ.ಗಳ ರಸ್ತೆಯಲ್ಲಿ 27 ಲಕ್ಷ ರೂ. ಇಡಲಾಗಿತ್ತು. ಈಗ ವಿದ್ಯುದ್ದೀಪ ಅಳವಡಿಸುವ ಬದಲು ಡಿವೈಡರ್ ನಲ್ಲಿ ಕಾಂಕ್ರೀಟ್ ಹಾಕಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯುದ್ದೀಪ ಅಳವಡಿಸಿದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಅನುಕೂಲ ಆಗುತ್ತಿತ್ತು. ನಗರದ ಸೌಂದರ್ಯವೂ ಹೆಚ್ಚುತ್ತಿತ್ತು. ಜತೆಗೆ ನನ್ನ ಪ್ರಯತ್ನದಿಂದ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುದ್ದೀಪ ಅಳವಡಿಕೆಗೆ ಎಂದೆ ಹಣ ಮಂಜೂರು ಮಾಡಲಾಗಿತ್ತು. ಈಗ ಅದನ್ನು ಬದಲಾಯಿಸುವುದು ಸರಿಯಲ್ಲ.
ಈಗ ಮಳೆಗಾಲದಲ್ಲಿ ಡಿವೈಡರ್ ನಲ್ಲಿ ನೀರು ನಿಂತು ರಸ್ತೆಯಲ್ಲಿ ವಾಹನ ಹೋಗುವಾಗ ಕೆಸರು ನೀರು ರಾಚುತ್ತಿದೆ. ಕೆಲವೆಡೆ ತಗ್ಗು ಇರುವುದರಿಂದ ಅಪಘಾತಕ್ಕೂ ಕಾರಣವಾಗಬಹುದು. ಹಾಗಾಗಿ ವಿದ್ಯುತ್ ದೀಪ ಅಳವಡಿಸಿ ಇದನ್ನು ಕೂಡಲೇ ಸರಿಪಡಿಸಲು ಮುಂದಾಗಬೇಕು. ಹಬ್ಬುವಾಡ ರಸ್ತೆಯ ಚರಂಡಿ ನಿರ್ಮಾಣಕ್ಕೆ ಅಗತ್ಯ ಹಣ ಇದ್ದರೂ ಈ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಚರಂಡಿಗೆ ಸಿಮೆಂಟ್ ಹಲಗೆಯನ್ನು ಶೀಘ್ರದಲ್ಲಿ ಮುಚ್ಚುವ ಅವಶ್ಯಕತೆ ಇದೆ. ಚಿಕ್ಕಮಕ್ಕಳು, ಮಹಿಳೆಯರು, ಜನತೆಗೆ ಸುರಕ್ಷಿತ ಓಡಾಟಕ್ಕೆ ಅವಕಾಶ ಒದಗಿಸಬೇಕಾಗಿದೆ. ಈ ರಸ್ತೆಯ ಪಕ್ಕದಲ್ಲಿ 300 ಮೀ. ಚರಂಡಿ ನಿರ್ಮಾಣ ಆಗಿದೆ. ಆದರೆ ಸ್ಲ್ಯಾಬ್ ಹಾಕುವ ಕಾರ್ಯ ಬಾಕಿ ಉಳಿದಿದೆ. ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಹಣ ಸಹ ಬಿಡುಗಡೆಯಾಗಿದೆ. ಈ ಕೂಡಲೇ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಮುಂದೆ ಎಪಿಎಂಸಿ ತನಕ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.