ಕಾರವಾರ: ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿದೆಯೆಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪತ್ರಿಕಾ ಭವನ ಫ್ಲೈಓವರ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿ ಡಿಸಿ ಕಚೇರಿಯ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತರ ಆತ್ಮಹತ್ಯೆ ತಡೆ, ಗೋಶಾಲೆ ರದ್ದು, ಕಿಸಾನ್ ಸಮ್ಮಾನ್ ಯೋಜನೆ ಹಿಂಪಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಗರು, ಐದು ಗ್ಯಾರೆಂಟಿ ಯೋಜನೆಗಳಿಗಾಗಿ ಉಳಿದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು. ಎಂಎಲ್ಸಿ ಗಣಪತಿ ಉಳ್ವೇಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಸುನೀಲ್ ಹೆಗಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಿಜೆಪಿಯ ಪ್ರಮುಖರು ಪಾಲ್ಗೊಂಡಿದ್ದರು.