ಕುಮಟಾ: ಪಟ್ಟಣದ ಮಾಸ್ತಿಕಟ್ಟೆಯ ಮಹಾಸತಿ ಸಭಾಭವನದಲ್ಲಿ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘ, ಎನ್‌ಎಸ್‌ಎಸ್ ಘಟಕದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಪಟ್ಟಣದ ಮಾಸ್ತಿಕಟ್ಟೆಯ ಮಹಾಸತಿ ಸಭಾಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ರಾಜಕೀಯ ಜೀವನದಲ್ಲಿ ಅಧಿಕಾರ ಬಂದಾಗಲೆಲ್ಲ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ದೊರಕಿಸಿಕೊಡುವಲ್ಲಿ ನಿರಂತರ ಪರಶ್ರಮ ವಹಿಸಿದ್ದೇನೆ. ನೆಲ್ಲಿಕೇರಿ ಪಿಯು ಕಾಲೇಜ್ ಹೆಮ್ಮರವಾಗಿ ಬೆಳೆಯಲು ಪ್ರಾರಂಭದಿoದಲೂ ಪ್ರಯತ್ನಿಸುತ್ತ ಬಂದಿದ್ದೇನೆ. ಕಾಲೇಜ್‌ನ ಸ್ಥಳಾಂತರ, ಅಭಿವೃದ್ಧಿಯಲ್ಲಿ ಈ ಮಟ್ಟದ ಬೆಳವಣಿಗೆಯಲ್ಲಿ ನನ್ನ ಪ್ರಾಮಾಣಿಕ ಸೇವೆ ಇದೆ. ಹಾಗಾಗಿ ಈ ಕಾಲೇಜ್‌ನಲ್ಲಿ 1800 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಖಾಸಗಿ ಕಾಲೇಜುಗಳಂತೆ ಈ ವಿದ್ಯಾರ್ಥಿಗಳು ಸಹ ಸಾಧನೆ ಮಾಡಿ, ಪ್ರತಿಭೆ ಮೆರೆದಿದ್ದಾರೆ ಎಂದು ಪ್ರಶಂಸಿದರು.
ಗೋರೆಯ ಎಕ್ಸ್ಲೆನ್ಸ್ ಪಿಯು ಕಾಲೇಜ್ ಪ್ರಾಂಶುಪಾಲ ಡಿ.ಎನ್. ಭಟ್ ಮಾತನಾಡಿ, ಏಕಾಗ್ರತೆ ಜೀವನದ ಸಾಧನೆಗೆ ಅಡಿಪಾಯವಾಗಿದೆ. ಉತ್ತಮ ಪರಿಸರದಿಂದ ಏಕಾಗ್ರತೆ ಸಾಧಿಸಲು ಸಾಧ್ಯ, ಅವಿರತ ಪ್ರಯತ್ನದ ಮೂಲಕ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡುವ ವಾರ್ಷಿಕ ಕಾರ್ಯಕ್ರಮಗಳು ಈ ಸಮಾರಂಭದ ಮೂಲಕ ಚಾಲನೆ ದೊರೆಯುತ್ತದೆ. ಸರ್ಕಾರಿ ಕಾಲೇಜಿನಲ್ಲಿ ಪ್ರತಿಭಾ ಸಂಪನ್ನರಿದ್ದಾರೆ ಎಂದರೆ ಅಭಿಮಾನದ ಸಂಗತಿ. ಸನ್ಮಾನಗಳು ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ಬಲಗೊಳಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಅವಕಾಶಗಳಿಂದ ಓಡದೇ ಅದನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಸತೀಶ್ ಬಿ.ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಿರಿಯ ಉಪನ್ಯಾಸಕ ಆರ್.ಎಚ್.ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉಪನ್ಯಾಸ ರಾಘವೇಂದ್ರ ಮಡಿವಾಳ ಎನ್‌ಎಸ್ ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕಿ ರೇಣುಕಾ ಹೆಗಡೆ ನಿರೂಪಿಸಿದರು. ಕ್ರೀಡಾ ಸಂಚಾಲಕ ನಾಗರಾಜ ನಾಯ್ಕ ವಂದಿಸಿದರು. ಸಂಸ್ಕೃತಿ ವಿಭಾಗದ ಸಂಚಾಲಕ ಎಸ್ ಎನ್ ನಾಯ್ಕ, ಸಿಡಿಸಿ ಸದಸ್ಯರಾದ ನಿತ್ಯಾನಂದ ನಾಯ್ಕ, ಮೋಹಿನಿ ಗೌಡ, ಜಯಾ ಶೇಟ್ ಇತರರು ಇದ್ದರು.