ಕಾರವಾರ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಶಾಂತಿಭಂಗ ತರುವಂಥ ಕಾರ್ಯದಲ್ಲಿ ತೊಡಗಿಕೊಂಡಿರುವ ಹೊರ ಭಾಗದ ಕೆಲವು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರವಾರ ತಾಲೂಕಾ ಪರ್ಶಿನ್ ಬೋಟ್ ಯುನಿಯನ್ ಬೈತಖೋಲದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಸಲ್ಲಿಸಿದ ಪರ್ಶಿನ್ ಬೋಟ್ ಯುನಿಯನ್ ಪದಾಧಿಕಾರಿಗಳು ಹಾಗೂ ಮೀನುಗಾರರು, ಬಂದರಿನಲ್ಲಿ 75ಕ್ಕೂ ಹೆಚ್ಚು ಪರ್ಶಿನ್ ಬೋಟುಗಳು ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಆಗಸ್ಟ್ 6ರಿಂದ ಕಡಲಿಗೆ ಇಳಿಯಲಿವೆ. ಈ ಬೋಟ್ಗಳಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಾರೆ. ಅಲ್ಲದೆ ಅಷ್ಟೇ ಕುಟುಂಬಗಳು ಮೀನುಗಾರಿಕೆಯ ದುಡಿಮೆಯನ್ನು ಅವಲಂಬಿಸಿವೆ ಎಂದು ತಿಳಿಸಿದ್ದಾರೆ. ಆದರೆ ಕಳೆದ ವರ್ಷದಿಂದ ಹೊರಗಿನಿಂದ ಬರುವ ಕೆಲ ವ್ಯಕ್ತಿಗಳು ಕಾರವಾರ ಮೀನುಗಾರಿಕಾ ಬಂದರಿನ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾರ್ಮಿಕರ ಹೆಸರಲ್ಲಿ ತಕರಾರು ತೆಗೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ನಮ್ಮ ಬೋಟುಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಲಾಸಿಗಳಲ್ಲಿ ಭಯದ ವಾತಾವರಣ ಎದುರಾಗಿದೆ. ಬೋಟ್ ಮಾಲಕರಿಗೆ ಈ ಬೆಳವಣಿಗೆ ಆತಂಕ ಮೂಡಿಸುವಂತಿದೆ ಎಂದು ತಿಳಿಸಿದ್ದಾರೆ.
ಮೀನುಗಾರಿಕೆ ಹಂಗಾಮಿನಲ್ಲಿ ನಮ್ಮ ಉದ್ಯೋಗಕ್ಕೆ ಕುತ್ತು ಎದುರಾದಲ್ಲಿ ಕಾರ್ಮಿಕರನ್ನು ಸಂಭಾಳಿಸುವುದು ಮತ್ತು ಉದ್ಯಮ ನಿರ್ವಹಣೆ ಮಾಡುವುದು ತೊಂದರೆದಾಯಕವಾಗಲಿದೆ. ವಿನಾಕಾರಣ ತೊಂದರೆ ಕೊಡುವ ಮತ್ತು ಮೀನುಗಾರಿಕೆ ವೃತ್ತಿಗೆ ತೊಡಕುಂಟು ಮಾಡುವ ಉದ್ದೇಶದಿಂದಲೇ ಇಂತಹ ವ್ಯಕ್ತಿಗಳ ನಡುವಳಿಕೆ ಕಂಡುಬರುತ್ತಿದೆ. ಹೀಗಾಗಿ ನಮ್ಮ ವೃತ್ತಿಗೆ ಯಾವುದೇ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕಾಗಿದೆಯಲ್ಲದೇ, ಕಾರವಾರ ಬಂದರಿನಲ್ಲಿ ಯಾವುದೇ ವ್ಯಕ್ತಿಗಳಿಂದ ಉದ್ಯಮಕ್ಕೆ ಅಡೆತಡೆ ಉಂಟಾಗದ ಹಾಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.