ಹೊನ್ನಾವರ: ತಾಲೂಕಿನ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಪತ್ರಕರ್ತರಿಗೆ ಗೌರವಿಸುವ ಕಾರ್ಯಕ್ರಮ ರೋಟರಿ ಸಭಾಭವನದಲ್ಲಿ ಜರುಗಿತು. ರೋಟರಿಕ್ಲಬ್ ಅಧ್ಯಕ್ಷ ದೀಪಕ್ ಲೋಪೀಸ್ ಮಾತನಾಡಿ, ವರ್ಷವಿಡೀ ನಡೆಯುವ ಕಾರ್ಯಕ್ರಮವನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ಸಮಾಜದ ಅಂಕು-ಡೊ0ಕುಗಳನ್ನು ತಿದ್ದುವ ಮಹತ್ಕಾರ್ದಲ್ಲಿ ಪಾಲ್ಗೊಂಡಿರುವ ಪತ್ರಕರ್ತರ ಸೇವಾ ಮನೋಭಾವ ಶ್ಲಾಘನೀಯ. ಓದುಗರು ಇಂದಿಗೂ ಪತ್ರಿಕೆಯನ್ನು ಅವಲಂಬಿಸಿದ್ದಾರೆ. ಪತ್ರಿಕೆ ತನ್ನ ವಿಶ್ವಾಸಾರ್ಹತೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ತನ್ನನ್ನು ತಾನು ಸಮರ್ಪಣಾ ಕಾರ್ಯ ಮಾಡುವ ರೋಟರಿ ಕ್ಲಬ್ ವಿಶ್ವದಾದ್ಯಂತ ಶಾಖೆಗಳನ್ನು ತೆರೆದಿದ್ದು, ಜನಪರವಾಗಿ ಕಾರ್ಯನಿರ್ವಹಿಸುತ್ತಿವೆ. ತಾಲೂಕಿನಲ್ಲಿ ಕಳೆದ 38 ವರ್ಷಗಳಿಂದ ಉಚಿತ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಕುಟುಂಬಗಳಿಗೆ ನೆರವಾಗಿದೆ. ನೆರಹಾವಳಿ ಸಮಯದಲ್ಲಿ ಸಹಾಯಹಸ್ತ ನೀಡಿ ನೊಂದವರ ಜೊತೆ ನಿಂತಿದೆ. ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲದಿದ್ದರೂ, ಒಳ್ಳೆಯದು, ಕೆಟ್ಟದ್ದು, ನೆರೆಹಾವಳಿ, ಬರಗಾಲ, ಸರ್ಕಾರದ ಹೊಸ ಯೋಜನೆಯಿಂದಾಗುವ ಒಳಿತು ಕೆಡುಕಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ. ರೋಟರಿ ಸಂಸ್ಥೆ ಪ್ರತೀ ವರ್ಷಪತ್ರಕರ್ತರನ್ನು ಪ್ರೋತ್ಸಾಹಿಸುತ್ತಾ ಬಂದಿರುವುದು ಮಾದರಿಯಾಗಿದೆ ಎಂದರು. ಕಾರ್ಯನಿರ್ತ ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ್ ಮಾತನಾಡಿ, ರೋಟರಿ ಸಂಸ್ಥೆ ವರ್ಷವಿಡೀ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ, ವೃತ್ತಿ ನಿರತರನ್ನು ಗುರುತಿಸುವ ಕೆಲಸಮಾಡುತ್ತಿದ್ದು, ಸಮಾಜಕ್ಕಾಗಿ ಸೇವೆ ಮಾಡಲು ಇಚ್ಛಿಸುವವವರಿಗೆ ಸಂಸ್ಥೆ ಉತ್ತಮ ವೇದಿಕೆಯಾಗಿದೆ. ಸಮಾಜದ ಅಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ವಷÀð ಸಂಸ್ಥೆಯು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೊನ್ನಾವರ ತಾಲೂಕು ಪತ್ರಕರ್ತರ ಜತೆ ಬೆರೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ಟ, ಸತೀಶ ತಾಂಡೇಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಗಮಿಸಿದ ಪತ್ರಕರ್ತರಿಗೆ ಹೂಗುಚ್ಛ ನೀಡಿ ನೆನಪಿನ ಕಾಣಿಕೆ ವಿತರಿಸಿ ಎಲ್ಲರನ್ನೂ ಗೌರವಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ರಾಜೇಶ ನಾಯ್ಕ, ಇವೆಂಟ್ ಚೇರ್‌ಮನ್ ಸ್ಟೀಫನ್ ರೋಡ್ರಗೀಸ್ ಉಪಸ್ಥಿತರಿದ್ದರು. ಸತೀಶ್ ನಾಯ್ಕ ಪ್ರಾರ್ಥಿಸಿ, ದಿನೇಶ್ ಕಾಮತ್ ನಿರೂಪಿಸಿದರು.