ಶಿರಸಿ: ನಗರದ ಯೋಗ ಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಸಂಸ್ಥೆ ಏರ್ಪಡಿಸಿದ್ದ ‘ಗುರು ಅರ್ಪಣೆ’ ಹಾಗೂ ‘ಕಲಾ ಅನುಬಂಧ’ ಸಂಗೀತ ಕಾರ್ಯಕ್ರಮವು ಸಂಗೀತಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಗುರು ಅರ್ಪಣೆ ಸಂದರ್ಭದಲ್ಲಿ ಖ್ಯಾತ ಸಿತಾರ್ ವಾದಕ ಪಂಡಿತ್ ಆರ್. ವಿ. ಹೆಗಡೆ ಹಳ್ಳದಕೈ ಅವರನ್ನು ಶಾಲು ಹೊದೆಸಿ ಫಲ, ತಾಂಬೂಲದೊಂದಿಗೆ ಗೌರವಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಅಶೋಕ್ ಹೆಗಡೆ ಮಾತನಾಡಿ, ಹಿರಿಯ ಸಂಗೀತ ಕಲಾವಿದರನ್ನು ಗೌರವಿಸುವುದು ಹಾಗೂ ಅವರನ್ನು ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನಗಳು ಯುವ ಸಂಗೀತಾಸಕ್ತರಿಗೆ ಸ್ಪೂರ್ತಿದಾಯಕವಾಗಿದ್ದು, ಅನುಭವಿ ಕಲಾವಿದರ ಗಾಯನ- ವಾದನ ಆಲಿಸುವುದರಿಂದ ಮಾನಸಿಕವಾಗಿ ಕೂಡ ನೆಮ್ಮದಿ ವಾತಾವರಣ ಉಂಟುಮಾಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿ. ಕೃಷ್ಣ ಭಟ್ ನೆಲೆಮಾವ್ ಮಾತನಾಡಿ, ವೇದ ಪುರಾಣ ಕಾಲದಿಂದಲೂ ಶಾಸ್ತ್ರೀಯ ಸಂಗೀತಕ್ಕೆ ಅದರದ್ದೆ ಆದ ಮಹತ್ವವಿದ್ದು ಇದರ ಕಲಿಕೆ ಹಾಗೂ ಆಲಿಸುವುದು ಶ್ರೇಷ್ಠವಾಗಿದೆ. ವ್ಯಕ್ತಿಗತವಾಗಿಯಾಗಲಿ, ಪ್ರಾಣಿಗಳಲ್ಲಾಗಲಿ ಅತ್ಯಂತ ಪ್ರಭಾವ ಬೀರುವ ಶಕ್ತಿ ಸಂಗೀತಕ್ಕಿದೆ ಎಂದರು.
ಅತಿಥಿಯಾಗಿದ್ದ ಕಾರ್ಯನಿರತ ಪತ್ರಕರ್ತ ಜಿಲ್ಲಾ ಸಂಘದ ಅಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಸಂಘಟನೆ ಮಾಡುವುದು ಸುಲಭವಾದದ್ದಲ್ಲ. ಅದರಲ್ಲೂ ಕಲಾಸಂಘಟನೆ ಬಹಳ ಕಷ್ಟಕರವಾದದ್ದಾಗಿದ್ದು, ಸಂಘಟನೆಯಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಶಾಸ್ತ್ರೀಯ ಬದ್ಧವಾದ ಕಲೆಯನ್ನು ಉಳಿಸುವತ್ತ, ಬೆಳೆಸುವತ್ತ ರಾಗಮಿತ್ರ ಪ್ರತಿಷ್ಠಾನ ಕಳೆದ 30 ವರ್ಷಗಳಿಂದ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾ ಪ್ರೋತ್ಸಾಹಕರಾದ ಆರ್.ಎನ್.ಭಟ್ ಸುಗಾವಿ ಅಧ್ಯಕ್ಷೀಯ ಮಾತುಗಳನ್ನು ಆಡಿದರು. ವೇದಿಕೆಯಲ್ಲಿ ನಿವೃತ್ತ ಸಂಗೀತ ಶಿಕ್ಷಕ ಪ್ರೊ. ಸಂಜೀವ ಪೋತದಾರ್ ಹಾಗೂ ನಿವೃತ್ತ ಇಂಜಿನಿಯರ್ ಎಮ್.ಎನ್. ಹೆಗಡೆ ಮಾಳೆನಳ್ಳಿ ಉಪಸ್ಥಿತರಿದ್ದರು.
ಸಭೆಯ ನಂತರದಲ್ಲಿ ರಾಗಮಿತ್ರ ಪ್ರತಿಷ್ಠಾನ ವಿದ್ಯಾರ್ಥಿಗಳ ಸಮೂಹ ಪ್ರಾರ್ಥನಾ ಗೀತೆ ನಡೆಯಿತು. ನಂತರ ನಡೆದ ಗಾಯನ ಕಾರ್ಯಕ್ರಮದಲ್ಲಿ ಯುವ ಗಾಯಕಿ, ಪಂಡಿತ್ ಮೇವುಂಡಿಯವರ ಶಿಷ್ಯೆ ವಿಭಾ ಹೆಗಡೆ ಯಲ್ಲಾಪುರ ರಾಗ ಧನಶ್ರೀಯನ್ನು ವಿಸ್ತಾರವಾಗಿ ಹಾಡಿ, ನಂತರದಲ್ಲಿ ಭಕ್ತಿ ಪ್ರಧಾನವಾದ ಜನಪ್ರಿಯ ಹಾಡು ನಾರಾಯಣತೆ ನಮೋ ನಮೋ ಹಾಡಿ ಸಭೆಯನ್ನು ಮಂತ್ರ ಮುಗ್ಧಗೊಳಿಸಿದರು. ವಿಭಾ ಹೆಗಡೆ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿದ್ವಾನ್ ಪ್ರಕಾಶ್ ಹೆಗಡೆ, ತಬಲಾದಲ್ಲಿ ಶಂಕರ್ ಹೆಗಡೆ ಶಿರಸಿ ಸಾತ್ ನೀಡಿದರು. ಕಲಾ ಅನುಬಂಧದ
ಕೊನೆಯ ಕಾರ್ಯಕ್ರಮವಾಗಿ ಗೌರವ ಸನ್ಮಾನ ಸ್ವೀಕರಿಸಿದ ಕರ್ನಾಟಕ ಕಲಾಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಡಿತ್ ಆರ್. ವಿ. ಹೆಗಡೆ ಹಳ್ಳದಕೈ ತಮ್ಮ ಸಿತಾರ್ ವಾದನ ಕಾರ್ಯಕ್ರಮ ನಡೆಸಿಕೊಟ್ಟು ರಾಕ್ ಜೋಗ್ ಅನ್ನು ವಿಸ್ತಾರಗೊಳಿಸಿದರು. ನಂತರದಲ್ಲಿ ಜನಾಪೇಕ್ಷೆಯ ಮೇರೆಗೆ ಜನಪ್ರಿಯ ಹಾಡೊಂದನ್ನು ನುಡಿಸಿ ಒಟ್ಟಾರೆ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು. ಸಿತಾರ್ ವಾದನಕ್ಕೆ ತಬಲಾದಲ್ಲಿ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ, ಹಾರ್ಮೋನಿಯಂನಲ್ಲಿ ವಿದ್ವಾನ್ ಪ್ರಕಾಶ್ ಹೆಗಡೆ ಸಮರ್ಥವಾಗಿ ಸಾಥ್ ನೀಡಿದರು.
ರಾಗ ಪ್ರತಿಷ್ಠಾನದ ಮುಖ್ಯಸ್ಥ ವಿ.ಪ್ರಕಾಶ ಹೆಗಡೆ ಯಡಳ್ಳಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಒಂದು ವರ್ಷಗಳ ಕಾಲ ಪ್ರತಿ ತಿಂಗಳ ಮೊದಲ ಸೋಮವಾರದಂದು ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ನಡೆಯುವ ಕುರಿತು ವಿವರಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.