ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಪ್ರತಿಭಾ ಪುರಸ್ಕಾರ ಉತ್ತೇಜಿಸುತ್ತದೆ ಎಂದು ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾರ್ಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯಕ ಅಭಿಪ್ರಾಯಪಟ್ಟರು.
ತಾಲೂಕಿನ ಕವಲಕ್ಕಿಯ ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠೈತರ ವಿಭಾಗದಲ್ಲಿ ಸಾಧನೆ ಮಾಡಲು ಹಲವು ಅವಕಾಶವಿದೆ. ಆ ರಂಗದಲ್ಲಿ ಸಾಧನೆ ಮಾಡುವಂತೆ ಸಲಹೆ ನೀಡಿದರು. ಉದ್ಯಮಿ ಶ್ರೀನಿವಾಸ ಮಹಾಲೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತರಾದ ಎಚ್.ಎಮ್.ಮಾರುತಿ, ಶಿಕ್ಷಣದ ಜೊತೆ ಸಹಪಠ್ಯ ವಿಭಾಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ವಿದ್ಯೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ ಎಂದರು.
ಶ್ರೀಭಾರತಿ ಎಜುಕೇಶನ್ ಟ್ರಸ್ಟ್ನ ಗೌರವ ಅಧ್ಯಕ್ಷ ವಿ.ಜಿ.ಹೆಗಡೆ ಗುಡ್ಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್.ಎಸ್.ಎಲ್.ಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಕನ್ನಡ ಶಿಕ್ಷಕಿ ಪ್ರತಿಮಾ ಬಿ.ಎಂ. ಸನ್ಮಾನಿಸಿ ಗೌರವಿಸಲಾಯಿತು. ಆಡಳಿತಾಧಿಕಾರಿಯಾದ ಎಂ.ಎಸ್.ಹೆಗಡೆ ಗುಣವಂತೆ ಹಾಗೂ ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್, ಕರಾಟೆ ಗುರು ಪ್ರಜ್ವಲ್ ಶೆಟ್ಟಿ, ಶಿವಾನಂದ ಭಟ್ಟ ಹಡಿನಬಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ವಿಜಯಲಕ್ಷ್ಮಿ ನಾಯ್ಕ ಹಾಗೂ ಉದ್ಯಮಿ ಶ್ರೀನಿವಾಸ ಮಹಾಲೆ ಶಿರಾಲಿಯವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಪ್ರೇಮಿಕ ಲೋಪೀಸ್ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ಮೇಸ್ತ ವಂದಿಸಿದರು. ಅಂಜನಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.