ಭಟ್ಕಳ: ಭಾರತೀಯ ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿ ದಲಿತರಿಗಿಂತಲೂ ಶೋಚನೀಯವಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿ ಕಾನೂನು ಮಂಡಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ಫಝ್ಲುರ್ರಹೀಮ್ ಮುಜದ್ದಿದಿ ಕಳವಳ ವ್ಯಕ್ತಪಡಿಸಿದರು.
ಅವರು ಭಾನುವಾರ ನವಾಯತ್ ಕಾಲೋನಿಯ ತಾಲೂಕಾ ಕ್ರೀಡಾಂಗಣದಲ್ಲಿ ರಾಬಿತಾ ಸೊಸೈಟಿ ಆಯೋಜಿಸಿದ್ದ ಬೃಹತ್ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
2023 ಎಚ್‌ಆರ್ಡಿ ವರದಿಯನ್ನು ಉಲ್ಲೇಖಿಸಿ ಅಂಕಿಅಂಶಗಳನ್ನು ನೀಡಿದ ಅವರು 2014ರಲ್ಲಿ ಮುಸ್ಲಿಮರ ಶೈಕ್ಷಣಿಕ ಸ್ಥಿತಿ ಉತ್ತಮವಾಗಿತ್ತು. ಆದರೆ 2023 ಅಂಕಿ ಅಂಶಗಳ ಪ್ರಕಾರ ಹಿಂದಿನ ಡೇಟಾವನ್ನು ಗಳಿಸಿಕೊಳ್ಳುವಲ್ಲಿ ಸಮುದಾಯ ವಿಫಲವಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಮುಸ್ಲಿಮನು ಶಿಕ್ಷಣಕ್ಕಾಗಿ ವಾರ್ಷಿಕ ರೂ.2007 ಖರ್ಚು ಮಾಡಿದರೆ ಇತರ ಸಮುದಾಯ ವಾರ್ಷಿಕ 4000 ರೂ ಖರ್ಚು ಮಾಡುತ್ತದೆ. ಶಿಕ್ಷಣಕ್ಕಾಗಿ ಯಾರು ಹೆಚ್ಚು ಹಣ ಕರ್ಚು ಮಾಡುತ್ತಾರೋ ಆ ಸಮುದಾಯ ಮುಂದುವರೆಯುತ್ತದೆ ಎಂಬುದು ಅಂಕಿ ಅಂಶಗಳು ಬಹಿರಂಗ ಪಡಿಸಿವೆ. ಆದರೆ ಮುಸ್ಲಿಮರ ಸ್ಥಿತಿ ಇಂದು ಇದಕ್ಕೆ ಭಿನ್ನವಾಗಿದ್ದು ಮದುವೆ ಇನ್ನಿತರ ಸಮಾರಂಭಗಳಿಗಾಗಿ ಸಾಲ ಪಡೆದು ಹಣ ಲಕ್ಷಾಂತರ ಹಣ ಕರ್ಚು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಭಟ್ಕಳ ತಾಲೂಕಿನ ರಾಬಿತಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಅಂಜುಮನ್ ನವಾಯತ್ ಕಾಲೋನಿ ಶಿಕ್ಷಕಿ ಸಮೀರಾ ಕುಂದನಗುಡ ಹಾಗೂ ರಾಬಿತಾ ಬೆಸ್ಟ್ ಸ್ಕೂಲ್ ಪ್ರಶಸ್ತಿಯನ್ನು ನೌನಿಹಾಲ್ ಸೆಂಟ್ರಲ್ ಸ್ಕೂಲ್ ಗೆ ನೀಡಿ ಪುರಸ್ಕರಿಸಲಾಯಿತು. ಅಲ್ಲದೇ 10ನೆ ತರಗತಿಯಿಂದ ಪದವಿ ತರಗತಿ ವರೆಗೆ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಪ್ರದಾನಿಸಲಾಯಿತು.
ರಾಬಿತಾ ಸಂಸ್ಥೆಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಅತಿಕುರ್ರಹ್ಮಾನ್ ಮುನಿರಿ ರಾಬಿತಾ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಖಲಿಫಾ ಜಮಾಅತ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದುಲ್ ರಬ್ ಖತೀಬಿ ನದ್ವಿ, ತಂಝೀಮ್ ಅಧ್ಯಕ್ಷ ಇನಾತುಲ್ಲಾ ಶಾಬಂದ್ರಿ, ಅಂಜುಮನ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು, ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಮೊಹತಿಶಮ್ ಬಿಲ್ಡರ್ಸ್ ನ ಅರ್ಷದ್ ಎಸ್.ಎಂ., ಉದ್ಯಮಿ ಮುಹಮ್ಮದ್ ಯೂನೂಸ್ ಖಾಝಿಯಾ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಶಫಿ ಪಟೇಲ್ ಶಾಬಂದ್ರಿ ಮತ್ತಿತರರು ಉಪಸ್ಥಿತರಿದ್ದರು.