ನವದೆಹಲಿ: ಆಗಸ್ಟ್ 1 ರಂದು ಪ್ರಧಾನಿ ಮೋದಿ ಪುಣೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೆಟ್ರೋ ಮಾರ್ಗ ಉದ್ಘಾಟನೆ, ಪ್ರಧಾನಮಂತ್ರಿ ಆವಾಸ್ ಮನೆಗಳ ಹಸ್ತಾಂತರ ಸೇರಿದಂತೆ ಹಲವು ಯೋಜನೆಗಳ ಚಾಲನೆ ನೀಡಲಿದ್ದಾರೆ. ಈ ದಿನ ಪ್ರಧಾನಿ ನರೇಂದ್ರ ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಲೋಕಮಾನ್ಯ ತಿಲಕರ ಪರಂಪರೆಯನ್ನು ಗೌರವಿಸಲು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ 1983ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ದುಡಿದ ಜನರಿಗೆ ಅವರ ಕೊಡುಗೆಯನ್ನು ಗಮನಾರ್ಹ ಮತ್ತು ಅಸಾಧಾರಣವೆಂದು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರ ಪುಣ್ಯತಿಥಿಯಂದು ಪ್ರದಾನ ಮಾಡಲಾಗುತ್ತದೆ.
ಇದೀಗ ಈ ಪ್ರಶಸ್ತಿಯನ್ನು ಸ್ವೀಕರಿಸಿರುವ 41ನೇ ಗಣ್ಯ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಈ ಹಿಂದೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ,ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಡಾ. ಮನಮೋಹನ್ ಸಿಂಗ್, ಎನ್.ಆರ್.ನಾರಾಯಣ ಮೂರ್ತಿ, ಡಾ. ಇ. ಶ್ರೀಧರನ್ ಸೇರಿದಂತೆ ಹಲವು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.