ಶಿರಸಿ: ಇತ್ತೀಚಿನ ದಿನದಲ್ಲಿ ಅನಾಥಾಶ್ರಮ,ವೃದ್ಧಾಶ್ರಮಗಳು ಹೆಚ್ಚುತ್ತಿದೆ. ಇವು ಒಳ್ಳೆಯ ಸಮಾಜದ ಲಕ್ಷಣವಲ್ಲ. ಮುಂದಿನ ದಿನಗಳಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಮಕ್ಕಳು ತಂದೆತಾಯಿಗಳನ್ನು ಸಾಕುವ,ಕಾಪಾಡುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.
ಅವರು ಪ್ರಜ್ವಲ ಟ್ರಸ್ಟ್ ಮೂಲಕ ತಾಲೂಕಿನ ಅಬ್ರಿಮನೆಯ ಸುಯೋಗಾಶ್ರಮದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡು, ಪಾಶ್ಚಾತ್ಯ ಸಂಸ್ಕೃತಿಯನ್ನು ತೊರೆದು, ನೆರವಿನ ಹಸ್ತವನ್ನು ಚಾಚುವ ಮೂಲಕ ಪ್ರೇರಣಾದಾಯಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ವೇಳೆ ಆಶ್ರಮಕ್ಕೆ ಅವಶ್ಯವಿರುವ ದಿನಸಿಗಳು, ಹಾಗು ಅಲ್ಲಿನ ಹಿರಿಯರಿಗೆ ಉಣ್ಣೆಯ ಸ್ಕಾರ್ಫ್’ಗಳನ್ನು ವಿತರಿಸಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯಂತೆ ಕೇಕ್ ಕತ್ತರಿಸಿ, ಹುಟ್ಟುಹಬ್ಬವನ್ನು ಆಚರಿಸುವ ಬದಲು, ಅವಶ್ಯಕತೆಯುಳ್ಳವರಿಗೆ ನಮ್ಮ ಕೈಲಾದ ಸಹಾಯನ್ನು ಮಾಡುವ ಮೂಲಕ ಜನ್ಮದಿನವನ್ನು ಸಾರ್ಥಕಗೊಳಿಸಲು ಪ್ರಯತ್ನಿಸಬೇಕು ಎಂದರು. ಸುಯೋಗಾಶ್ರಮದ ಮುಖ್ಯಸ್ಥೆ ಲತಿಕಾ ಭಟ್ ಕಾರ್ಯ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಕೇವಲ ಹಣವಿದ್ದರೆ ಇಂತಹ ಕೆಲವನ್ನು ಮಾಡಬಹುದು ಎಂಬುದು ಸುಳ್ಳು, ಈ ಕೆಲಸಕ್ಕೆ ಹಣಕ್ಕಿಂತ, ಕೆಲಸ ಮಾಡುವ ಮನಸ್ಸಿರಬೇಕು. ಈಗಿನ ಕಾಲದಲ್ಲಿ ಸ್ವಂತ ತಂದೆ ತಾಯಿಯನ್ನೇ ನೋಡಿಕೊಳ್ಳಲಾಗದ ಮಕ್ಕಳಿದ್ದಾರೆ. ಆದರೆ ಲತಿಕಾ ಭಟ್ ಗುರುತು ಪರಿಚಯವೇ ಇಲ್ಲದ ಹಿರಿಯರಿಗೆ ಪ್ರೀತಿ ನೀಡಿ, ಕಾಳಜಿ ಮಾಡಿ, ತಮ್ಮ ಜೀವನವನ್ನೇ ಅವರಿಗಾಗಿ ಮುಡಿಪಿಟ್ಟಂತೆ ಬದುಕುತ್ತಿದ್ದಾರೆ. ಇಂತಹ ಒಳ್ಳೆಯ ಕಾರ್ಯಕ್ಕೆ ನನ್ನ ಕೈಲಾದಷ್ಟು ಅಳಿಲು ಸೇವೆಯನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹಾಯಹಸ್ತ ಚಾಚಬೇಕು. ಒಳ್ಳೆಯ ಕಾರ್ಯಕ್ಕೆ ಸದಾ ಪ್ರೋತ್ಸಾಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಆಶ್ರಮದ ಮುಖ್ಯಸ್ಥೆ ಲತಿಕಾ ಭಟ್, ನಾನು ಈ ಆಶ್ರಮ ನಡೆಸುತ್ತಿರುವುದು ಯಾವುದೇ ಪ್ರಚಾರಕ್ಕಾಗಿ, ಹಣಕ್ಕಾಗಿ ಅಲ್ಲ. ತುಂಬು ಮನಸ್ಸಿನಿಂದ ಈ ಕೆಲಸ ಮಾಡುತ್ತಿದ್ದೇನೆ. ದೇಣಿಗೆಗಾಗಿ ಎಲ್ಲಿಯೂ ಅಲೆದಾಡಿಲ್ಲ. ಸಂಘ ಸಂಸ್ಥೆಗಳು, ಹಿರಿಯರು, ಯುವಜನತೆ ಅವರಾಗೆ ಬಂದು ಅವರಿಚ್ಛೆಯಂತೆ ದಾನಗಳನ್ನು ನೀಡುತ್ತಿದ್ದಾರೆ. ನಮಗೆ ಪ್ರತಿ ದಾನಿಯು ಪ್ರಾತಃಸ್ಮರಣೀಯ ಎಂದರು.
ನಂತರದಲ್ಲಿ ಪ್ರಜ್ವಲ ಟ್ರಸ್ಟ್ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು. ಹಾರ್ಮೋನಿಯಂನಲ್ಲಿ ಕಮಲಾ ಹೆಗಡೆ ಹಾಗು ತಬಲಾದಲ್ಲಿ ಸುಬ್ಬಣ್ಣ ಮಂಗಳೂರು ಸಹಕಾರ ನೀಡಿದರು. ಕಾರ್ಯಕ್ರಮವನ್ನು ಟ್ರಸ್ಟ್ ಕಾರ್ಯದರ್ಶಿ ಸುಮಾ ಹೆಗಡೆ ನಿರೂಪಿಸಿ ಸ್ವಾಗತಿಸಿದರೆ, ಸದಸ್ಯೆ ನಯನ ಹೆಗಡೆ ವಂದಿಸಿದರು. ಟ್ರಸ್ಟ್ ಪದಾಧಿಕಾರಿ ದತ್ತಾತ್ರೆಯ ಹೆಗಡೆ ಸಹಕರಿಸಿದರೆ, ಸದ್ಯಸರುಗಳಾದ ಅಖಿಲ್, ಸುವರ್ಣಾ ಕಾನಗೋಡು, ಸುಗಂಧಿ ಗುರುಪ್ರಸಾದ್ ಉಪಸ್ಥಿತರಿದ್ದರು.