ಸಿದ್ದಾಪುರ: ಹಿಂದುಳಿದ ವರ್ಗದ ಹಿರಿಯ ನಾಯಕರದಂತಹ ಬಿ.ಕೆ ಹರಿಪ್ರಸಾದ ಅವರನ್ನು ಆಡಳಿತಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಿದೆ. ಕಳೆದ 40 ವರ್ಷಗಳಿಂದ ಪಕ್ಷದ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅವರ ಸೂಲ್ತವಾದ ಸ್ಥಾನವನ್ನು ನೀಡದಿರುವ ಕ್ರಮ ಇದು ಸರಿಯಲ್ಲ. ಪಕ್ಷಕ್ಕಾಗಿ ಇಷ್ಟೊಂದು ಸುದೀರ್ಘ ಕಾಲ ದುಡಿದ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡದೆ ಇದ್ದಲ್ಲಿ ಅದರ ಪರಿಣಾಮವನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಈಡಿಗ ನಾಮಧಾರಿ ಮಹಾ ಮಂಡಳದ ತಾಲೂಕ ಅಧ್ಯಕ್ಷ ರಾಜೇಶ ನಾಯ್ಕ ಕತ್ತಿ, ಕೋಲಶಿರ್ಸಿ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ಆಡಳಿತ ರೂಢ ಕಾಂಗ್ರೆಸ್ ಸರ್ಕಾರಕ್ಕೆ ಮಾಧ್ಯಮದ ಮುಖಾಂತರ ಒಂದು ಮನವಿ ಮಾಡುತ್ತಿದ್ದೇವೆ. ಇಂದಿನ ಈ ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ರವರು ನಮ್ಮ ಹಿಂದುಳಿದ ವರ್ಗದ ಹಿರಿಯ ನಾಯಕರದಂತಹ ಬಿ.ಕೆ ಹರಿಪ್ರಸಾದ ರವರನ್ನು ಆಡಳಿತಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಅವರನ್ನು ಕಡೆಗಣಿಸುತ್ತಿದೆ ಇದು ಸರಿಯಲ್ಲ. ಪಕ್ಷಕ್ಕಾಗಿ ಇಷ್ಟೊಂದು ಸುದೀರ್ಘ ಕಾಲ ದುಡಿದ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡದೆ ಇದ್ದಲ್ಲಿ ಅದರ ಪರಿಣಾಮವನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ಅವರ ಶ್ರಮವೂ ತುಂಬಾ ಇದೆ. ರಾಜ್ಯಾದ್ಯಂತ ಪ್ರವಾಸವನ್ನು ಮಾಡಿ ಹಲವರ ಗೆಲುವಿಗೆ ಕಾರಣರಾಗಿದ್ದಾರೆ. ಅವರಿಗೆ ಪಕ್ಷ ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲಿ ಕಡೆಗಣಿಸುವುದು ಸರಿಯಲ್ಲ ಎಂದರು.
ಬಿಜೆಪಿ ಪಕ್ಷದ ವಿರುದ್ಧ ಯಾರಾದರೂ ಅವರ ಆಡಳಿತದ ಅವಧಿಯಲ್ಲಿ ಮಾತನಾಡಿದ್ದು ಇದ್ದರೆ ಅದು ನಮ್ಮ ಬಿ.ಕೆ ಹರಿಪ್ರಸಾದ ಮಾತ್ರ. ಆದರೆ ಅವರಿಗೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅನ್ಯಾಯವಾಗಿದೆ. ಅದನ್ನು ನಾವು ಇಂದು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಅವರನ್ನು ಹೀಗೆ ನಿರ್ಲಕ್ಷಿಸಿದಲ್ಲಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಸಮಾಜದ ವತಿಯಿಂದ ಕಾಂಗ್ರೆಸ್ಸಿಗೆ ತಕ್ಕ ಉತ್ತರವನ್ನು ಕೊಡುತ್ತೇವೆ ಎಂದರು.
ಭೀಮಣ್ಣ ನಾಯ್ಕರವರನ್ನು ಗೆಲ್ಲಿಸಿ ತರಿಸಲು ಸಿರಸಿ ಸಿದ್ದಾಪುರ ಕ್ಷೇತ್ರದ ನಮ್ಮ ಸಮುದಾಯದವರ ಕೊಡುಗೆ ಸಹ ಇದೆ. ಅದೆ ರೀತಿ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ನಮ್ಮ ಸಮುದಾಯದ ಸಹಕಾರ ನೀಡಿರುವುದನ್ನು ಮರೆಯುವಂತಿಲ್ಲ. ಹೀಗಿರುವಾಗ ನಮ್ಮ ಸಮಾಜದ ಹಿರಿಯ ನಾಯಕರನ್ನು ಕಡೆಗಣಿಸಿರುವುದು ನೋವನ್ನು ಉಂಟು ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದರು. ಆದರೆ ಇಂದು ಕಾಂಗ್ರೆಸಿನಲ್ಲಿ ಕೇವಲ ಓರ್ವರಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಲಾಗಿದೆ.
ಇದನ್ನು ಸಮಾಜ ಒಪ್ಪುವುದಿಲ್ಲ. ಹೀಗೆ ಅನ್ಯಾಯವಾದರೆ ಪ್ರಣವಾನಂದ ಸ್ವಾಮೀಜಿಯವರ ನೇತ್ರತ್ವದಲ್ಲಿ ನಾವು ಬೆಂಗಳೂರಿನವರೆಗೆ ತೆರಳಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ,ಕಾರ್ಯದರ್ಶಿ ಬಾಬು ಡಿ.ನಾಯ್ಕ ಕಡಕೇರಿ, ಪದಾಧಿಕಾರಿಗಳಾದ ಪಾಂಡುರoಗ ಜಿ.ನಾಯ್ಕ ಹಳದೋಟ, ಜಿಲ್ಲಾ ಸಮಿತಿ ಸದಸ್ಯರಾದ ರವಿಕುಮಾರ ಕೋಠಾರಿ,ಮಹಾತ್ಮ ನಾಯ್ಕ ಹೆಗ್ಗೋಡಮನೆ,ಅನೀಲ ಕೋಠಾರಿ ಮೊದಲಾದವರು ಉಪಸ್ಥಿತರಿದ್ದರು.