ಯಲ್ಲಾಪುರ: ಎಲೆಚುಕ್ಕೆ ರೋಗದ ಕುರಿತು ಅಡಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಆದರೆ ಈ ಬಗ್ಗೆ ಮುಂಜಾಗೃತೆ ಅವಶ್ಯ ಎಂದು ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಹೇಳಿದರು.
ತೋಟಗಾರಿಕಾ ಇಲಾಖೆ ಹಾಗೂ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಡಕೆ ಭವನದಲ್ಲಿ ಗುರುವಾರ ಎಲೆಚುಕ್ಕಿ ರೋಗದ ನಿಯಂತ್ರಣದ ಬಗ್ಗೆ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಈ ರೋಗವು ಯಲ್ಲಾಪುರ ಭಾಗದಲ್ಲಿ ವಿರಳವಾಗಿ ಕಂಡುಬಂದಿದೆ. ಬೇಸಿಗೆಯ ಸಂದರ್ಭದಲ್ಲಿ ಮಣ್ಣಿನ ಉಷ್ಣತೆ ಜಾಸ್ತಿಯಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ಹೊಸದಾಗಿ ಬಂದ ರೋಗವಲ್ಲ ಎಂದ ಅವರು, ಈ ರೋಗದ ನಿಯಂತ್ರಣಕ್ಕೆ ವೈಜ್ಞಾನಿಕ ಪರಿಹಾರಗಳನ್ನು ಅನುಸರಿಸಬೇಕು. ಜೊತೆಯಲ್ಲಿ ರೋಗವನ್ನು ದೂರ ಮಾಡುವಂತೆ ಊರಿನ ಎಲ್ಲ ದೇವಾಲಯಗಳಲ್ಲಿ ಅಡಕೆ ಬೆಳೆಗಾರರಾದ ನಾವೆಲ್ಲರೂ ಪ್ರಾರ್ಥಿಸಬೇಕು ಎಂದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಬಿ.ಪಿ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲೆಚುಕ್ಕಿ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಅಡಿಕೆ ಬೆಳೆಗಾರರು ಸೇರಿ ಸಾಮೂಹಿಕವಾಗಿ ಪ್ರಯತ್ನಿಸಿದರೆ ಈ ರೋಗವನ್ನು ನಿಯಂತ್ರಿಸಬಹುದು. ರೋಗ ನಿಯಂತ್ರಣಕ್ಕೆ ಅಗತ್ಯವಾದ ಔಷಧಿಗಳು ಲಭ್ಯ ಇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪಿ.ಜಿ.ಭಟ್ಟ ಬರಗದ್ದೆ ಮಾತನಾಡಿದರು. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡಿನ ಪ್ರಧಾನ ವಿಜ್ಞಾನಿ ವಿನಾಯಕ ಹೆಗಡೆ, ವಿಷಯತಜ್ಞ ವಿ.ಎಂ.ಹೆಗಡೆ ರೋಗ ನಿಯಂತ್ರಣದ ಕುರಿತು ಮಾತನಾಡಿದರು.