• Slide
    Slide
    Slide
    previous arrow
    next arrow
  • ಜಿಲ್ಲೆಯಲ್ಲಿ 439 ಕಡೆಗಳಲ್ಲಿ ಭೂಕುಸಿತವಾಗುವ ಸಂಭವ: ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿ

    300x250 AD

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆರ್ಭಟಿಸುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ಜನ ಸ್ವಲ್ಪ ಚೇತರಿಸಿಕೊಳ್ಳುವಷ್ಟರಲ್ಲೇ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿ ಜಿಲ್ಲೆಯ ಜನರನ್ನ ಮತ್ತೆ ಆತಂಕಿತರನ್ನಾಗಿ ಮಾಡಿದೆ.
    ಬಹುಪಾಲು ಬೆಟ್ಟಗುಡ್ಡಗಳನ್ನೇ ಹೊಂದಿರುವ ಉತ್ತರ ಕನ್ನಡದಲ್ಲಿ ಮಲೆನಾಡನ್ನ ಕರಾವಳಿಗೆ ಬೆಸೆಯುವ ನದಿಗಳು ಹತ್ತಾರಿವೆ. ಅಷ್ಟೇ ಜಲಾಶಯಗಳೂ ಇವೆ. ಹೀಗಾಗಿ ಎಲ್ಲಿಯೇ ಮಳೆ ಹೆಚ್ಚಾದರೂ ಪ್ರವಾಹವಂತೂ ಕಟ್ಟಿಟ್ಟ ಬುತ್ತಿ. ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿಯ0ಥ ಪ್ರಮುಖ ನದಿಗಳು ಮಳೆಗಾಲದಲ್ಲಿ ತುಂಬಿ ಹರಿದು ನೆರೆ ಸೃಷ್ಟಿಸುವುದು ಒಂದೆಡೆಯಾದರೆ, ಐಆರ್ಬಿಯ ಅರೆಬರೆ ಕಾಮಗಾರಿಯಿಂದಾಗಿ ಉಂಟಾಗುವ ಅನಾಹುತಗಳೂ ಲೆಕ್ಕಿಲ್ಲ. ಇವುಗಳ ನಡುವೆ ಇದೀಗ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ವರದಿ ಕೂಡ ಜಿಲ್ಲೆಯ ಜನರ, ಅಧಿಕಾರಿಗಳ ನಿದ್ದೆಗೆಡಿಸುವಂತೆ ಮಾಡಿದೆ.

    ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ ಜಿಲ್ಲೆಯ 439 ಕಡೆಗಳಲ್ಲಿ ಭೂಕುಸಿತ ಸಂಭವಿಸುವ ಮುನ್ನೆಚ್ಚರಿಕಾ ವರದಿಯನ್ನ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪೈಕಿ ಯಲ್ಲಾಪುರ ತಾಲೂಕಿನ ಕಳಚೆ, ಅಣಶಿ ಘಟ್ಟ, ಅರಬೈಲ್ ಘಟ್ಟ ಮುಂತಾದವುಗಳ ಜೊತೆಗೆ ಜಲಾಶಯಗಳ ಅಕ್ಕಪಕ್ಕದ ಪ್ರದೇಶಗಳೂ ಕುಸಿಯುವ ಸಾಧ್ಯತೆ ಇರುವ ಬಗ್ಗೆ ವರದಿ ನೀಡಿರುವುದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಂಟೆಯ0ತಾಗಿದೆ.
    ಈಗಾಗಲೇ ಮಳೆ ಚುರುಕುಗೊಂಡಿದ್ದು, ಒಂದು ವಾರ ಸುರಿದ ಮಳೆಗೆ ಜಿಲ್ಲೆಯೆಲ್ಲೆಡೆ ಅನೇಕ ಅನಾಹುತಗಳು ನಡೆದು ಅಪಾರ ಹಾನಿಗೆ ಕಾರಣವಾಗಿದೆ. ಸದ್ಯ ಮಳೆ ಕೊಂಚ ಬಿಡುವು ನೀಡಿದೆಯೆಂದರೂ ಸಹ ಆಗಸ್ಟ್ ಸಮಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಒಂದುವೇಳೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ವರದಿಯಲ್ಲಿ ಸೂಚಿಸಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸದಿದ್ದರೆ ಭಾರೀ ಪ್ರಮಾಣದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.
    ಹೀಗಾಗಿ ಜಿಲ್ಲಾಡಳಿತ ಈ ವರದಿಯನ್ನ ಗಂಭೀರವಾಗಿ ಪರಿಗಣಿಸಬೇಕಿದ್ದು, ಜಿಎಸ್‌ಐ ಸೂಚಿಸಿರುವ ಪ್ರದೇಶಗಳಲ್ಲಿ ಒಂದುವೇಳೆ ಭೂಕುಸಿತವಾದರೆ ಉಂಟಾಗಬಹುದಾದ ಅನಾಹುತಗಳ ಕುರಿತು ಕೂಡ ಸಾಧ್ಯತಾ ವರದಿಯನ್ನ ಜಿಲ್ಲಾಡಳಿತ ತಯಾರಿಸಬೇಕಿದೆ. ಅದರ ಅನ್ವಯ ಜನಜಾನುವಾರುಗಳ ಸ್ಥಳಾಂತರ, ರಕ್ಷಣೆಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top