ಸಿದ್ಧಾಪುರ: ಪರಿಸರ ಜಾಗೃತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ಲಕ್ಷ ವೃಕ್ಷ ನೆಡುವ ಅಭಿಯಾನದ ಅಂಗವಾಗಿ ಸಿದ್ಧಾಪುರದಲ್ಲಿ ಜುಲೈ 31ರಂದು ಲಕ್ಷ ವೃಕ್ಷ ಅಭಿಯಾನ ಚಾಲನೆ ನೀಡಲಿದ್ದು, ತಾಲೂಕಿನ 24 ಗ್ರಾಮ ಪಂಚಾಯತಿಯ ಸುಮಾರು 90 ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇದಿಕೆಯ ಪ್ರಮುಖರು ಇಂದು ಪ್ರವಾಸ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ವಾಸ್ತವ್ಯಕ್ಕಾಗಿ ಅರಣ್ಯ ಪ್ರದೇಶ ಮಾಡಿಕೊಂಡ ಅತಿಕ್ರಮಣದಾರ ಪ್ರತಿ ಕುಟುಂಬವೂ ಮೂರು ಗಿಡ, ಸಾಗುವಳಿಗಾಗಿ ಮಾಡಿಕೊಂಡ ಅರಣ್ಯ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಗಿಡ ನೆಡಲು ಹಾಗೂ ಅರಣ್ಯ ಅತಿಕ್ರಮಣದಾರರು ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕ ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಘು ಕವಂಚೂರು, ಸುನಿಲ್ ನಾಯ್ಕ ಸಂಪಖ0ಡ, ದಿನೇಶ್ ಬೇಡ್ಕಣಿ, ಸರಸ್ವತಿ ನಾಯ್ಕ ಶಿರಳಗಿ, ಜಗದೀಶ್ ಶಿರಳಗಿ, ಸುಧಾಕರ ಮಡಿವಾಳ ಬಿಳಗಿ, ಭಾಸ್ಕರ ಮುಗದೂರು, ರವಿ ಹಂಜಗಿ ಮುಂತಾದವರು ನೇತೃತ್ವ ವಹಿಸಿದ್ದರು. ಗಜಾನನ ಮರಾಠಿ ಸ್ವಾಗತಿಸಿ, ವಂದಿಸಿದರು.
30 ಸಾವಿರ ಗಿಡ: ಐತಿಹಾಸಿಕ ವೃಕ್ಷ ಕ್ರಾಂತಿ ಕಾರ್ಯಕ್ರಮ ಅರಣ್ಯ ಸಾಂದ್ರತೆ ಹೆಚ್ಚಿಸಲು ಸಹಕಾರಿಯಾಗಿರುವುದರಿಂದ, ಐತಿಹಾಸಿಕ ಕಾರ್ಯಕ್ರಮವನ್ನು ಜುಲೈ 31 ರಿಂದ ಚಾಲನೆಗೊಂಡು ಅಗಸ್ಟ 14ರವರೆಗೆ ತಾಲೂಕಿನಾದ್ಯಂತ ಸುಮಾರು 30ಸಾವಿರ ಗಿಡ ನೆಡಲು ತೀರ್ಮಾನಿಸಲಾಯಿತು.