ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಸಿಗದೆ ಮಗು ಮೃತಪಟ್ಟಿರುವುದು ದುಃಖದ ಸಂಗತಿಯಾಗಿದೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಮಗುವಿನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.
ಅಂಬ್ಯುಲೆನ್ಸ್ ಸಿಗದೆ ಮಗು ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಆಸ್ಪತ್ರೆಗೆ ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ಸೇರಿದಂತೆ ಎರಡು ಅಂಬ್ಯುಲೆನ್ಸ್ಗಳನ್ನು ನಾನೇ ನೀಡಿದ್ದೇನೆ. ಅಂಕೋಲಾಕ್ಕೂ ಎರಡು ಅಂಬ್ಯುಲೆನ್ಸ್ ನೀಡಿದ್ದೇನೆ. ಆ ಅಂಬ್ಯುಲೆನ್ಸ್ಗೆ ಇರುವ ವೆಂಟಿಲೇಟರ್ ಬದಲಾಯಿಸಿ ಚಿಕ್ಕ ಮಕ್ಕಳಿಗೆ ಬಳಸುವ ವೆಂಟಿಲೇಟರ್ ಅಳವಡಿಸಿ ಉನ್ನತ ಆಸ್ಪತ್ರೆಗಳಿಗೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆಯೂ ಗಮನಹರಿಸಬೇಕಿತ್ತು. ತುರ್ತು ಸಂದರ್ಭದಲ್ಲಿ ಅಂಕೋಲಾ ಹಾಗೂ ಕಾರವಾರಕ್ಕೆ ನೀಡಿರುವ ಅಂಬ್ಯುಲೆನ್ಸ್ ಗಳನ್ನು ಹೊಂದಾಣಿಕೆ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆಯೂ ಗಮನಹರಿಸಬೇಕು.
ಚಿಕಿತ್ಸೆಗೆ ಬಂದ ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರ ಪಾಲಕರಿಗೆ ಮಾಹಿತಿ ನೀಡಿ ಬೇರೆ ಜಿಲ್ಲೆಗಳ ಉನ್ನತ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸ್ಸು ಮಾಡಬೇಕಾಗಿತ್ತು. ಅದನ್ನು ಬಿಟ್ಟು ಕೊನೇಗಳಿಗೆಯಲ್ಲಿ ಬೇರೆಡೆ ಕರೆದೊಯ್ಯುವಂತೆ ತಿಳಿಸಿದರೆ ಪಾಲಕರು ಏನು ಮಾಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹ ಅವಾಂತರಗಳು ನಡೆಯುತ್ತಲೇ ಇದೆ. ಅಂಬ್ಯುಲೆನ್ಸ್ ಎಷ್ಟು ಲಭ್ಯವಿದೆ. ವೆಂಟಿಲೇಟರ್ ಎಷ್ಟು ಇದೆ ಎನ್ನುವ ಮಾಹಿತಿಯನ್ನು ಜನರಿಗೆ ತಿಳಿಯುವಂತೆ ಬೋರ್ಡನಲ್ಲಿ ಹಾಕಬೇಕು. ಯಾವ ವೈದ್ಯರು ಲಭ್ಯವಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ನೀಡಬೇಕು.
ಈ ಹಿಂದೆ ನಾನು ಶಾಸಕಿಯಾಗಿದ್ದಾಗ ಜಿಲ್ಲಾ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಬಡವರಿಗೆ ನ್ಯಾಯ ದೊರಕಿಸಲು ಪ್ರಯತ್ನ ನಡೆಸುತ್ತಿದ್ದಾಗ ಅದಕ್ಕೆ ರಾಜಕೀಯ ಬಣ್ಣ ಬಳಿಯಲಾಯಿತು. ಜನತೆಯ ಆರೋಗ್ಯದ ವಿಷಯದಲ್ಲಿ ರಾಜಕೀಯ ಮಾಡಬಾರದು. ಪ್ರತಿ ವ್ಯಕ್ತಿಯ ಜೀವವೂ ಮುಖ್ಯವಾದದ್ದು. ಗಂಭೀರ ಪರಿಸ್ಥಿತಿಯಲ್ಲಿರುವ ಕೆಲ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಕೊನೇ ಗಳಿಗೆಯಲ್ಲಿ ಬೇರೆಡೆ ಕರೆದೊಯ್ಯುವಂತೆ ಹೇಳಿದ ಉದಾಹರಣೆಯೂ ಇದೆ. ಕೆಲ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದಾದರೂ ಬೇರೆಡೆ ಕರೆದೊಯ್ಯುವಂತೆ ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಯಾಕೆ ಹೀಗೆಲ್ಲ ನಡೆಯುತ್ತಿದೆ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಮುಂಬರುವ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾದೀತು ಎಂದು ರೂಪಾಲಿ ಎಸ್.ನಾಯ್ಕ ಎಚ್ಚರಿಕೆ ನೀಡಿದ್ದಾರೆ.