ಅಂಕೋಲಾ: ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗಿದ್ದ ಪ್ರೌಢಶಾಲಾ ಮಕ್ಕಳಿಗೆ ಗದ್ದೆ ಅಂದರೆ ಏನು? ಬೇಸಾಯ ಅಂದರೆ ಹೇಗೆ? ನಾಟಿ ಹೇಗೆ ಮಾಡಬೇಕು? ಎಂದೆಲ್ಲ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಗದ್ದೆಯಲ್ಲಿ ನಾಟಿ ಮಾಡುವುದರೊಂದಿಗೆ ಎಲ್ಲರ ಗಮನ ಸೆಳೆದರು.
ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ತಾಲೂಕಿನ ತೆಂಕಣಕೇರಿ ಗ್ರಾಮದ ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು.
ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮವನ್ನು ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಪಾಠವನ್ನು ಮಾಡುತ್ತಿರುವ ಸಂದರ್ಭದಲ್ಲಿ ಅನೇಕಾರು ಪ್ರಶ್ನೆಗಳನ್ನು ಕೇಳಿ, ತಮ್ಮಲ್ಲಿರುವ ಅನುಮಾನಗಳನ್ನು ಬಗೆಹರಿಸಿಕೊಂಡರು ಹಾಗೆಯೇ ಮಕ್ಕಳ ನಾಟಿ ಮಾಡುವ ಉತ್ಸಾಹವನ್ನು ಕಂಡ ಪಾಲಕರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.
ಪಾಠದಲ್ಲಿ ಕೃಷಿ ಚಟುವಟಿಕೆಯ ಕುರಿತು ಮೌಖಿಕವಾಗಿ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ತೋರ್ಪಡಿಸಿದರೆ ವಿದ್ಯಾರ್ಥಿಗಳು ವಾಸ್ತವತೆಯನ್ನು ಅರಿಯಲು ಸಾಧ್ಯ ಎನ್ನುವ ಧ್ಯೇಯದೊಂದಿಗೆ ಮುಖ್ಯಾಧ್ಯಾಪಕ ನಿತ್ಯಾನಂದ ನಾಯ್ಕ, ಶಿಕ್ಷಕರಾದ ಭಾರತಿ ನಾಯ್ಕ, ದೇವಿಯಾನಿ ನಾಯಕ, ರಜನಿ ನಾಯ್ಕ, ಮಧುಕೇಶ್ವರ ನಾಯ್ಕ ಮಕ್ಕಳನ್ನು ಭತ್ತದ ಗದ್ದೆಗೆ ಕರೆದೊಯ್ದು ಪಾಠ ಹೇಳಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ರಾಜೇಶ ನಾಯ್ಕ ಕೂಡ ಮಕ್ಕಳೊಂದಿಗೆ ಗದ್ದೆಗಿಳಿದಿದ್ದರು.