ಹಳಿಯಾಳ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಕೋಶ, ಮಾಹಿಳಾ ಘಟಕ, ಐಕ್ಯುಎಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಮಾನವ ಕಳ್ಳಸಾಗಾಣಿಕೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಡಾ.ಮಲ್ಪಶ್ರೀ ಆರ್. ಎಲ್ಲರನ್ನು ಸ್ವಾಗತಿಸಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಐಕ್ಯುಎಸಿ ಸಂಯೋಜಕ ಡಾ.ಸಂಗೀತಾ ಕಟ್ಟಿಮನಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಮ್ಮ ಎಮ್.ಇಚ್ಚಂಗಿ, ಲೈಂಗಿಕ ಶೋಷಣೆಗೆ ಒಳಗಾದ 18 ವರ್ಷದ ಒಳಗಿನ ಮಕ್ಕಳಿಗೆ ಸಿಗುವ ಉಚಿತ ಕಾನೂನು ನೆರವು ಕುರಿತು ಮತ್ತು ಪಿತ್ರಾರ್ಜಿತ ಆಸ್ತಿ ಕುರಿತು ಮಾಹಿತಿ ನೀಡಿದರು.
ವಕೀಲರಾದ ರಾಧಾರಾಣಿ ಕೊಳಂಬೆ ಲೈಂಗಿಕ ಅಪರಾಧ ಪ್ರಕರಣ ದಾಖಲಿಸುವ, ಅಪರಾಧಿಗಳಿಗೆ ನೀಡುವ ಶಿಕ್ಷೆಗಳು ಹಾಗೂ ಮಕ್ಕಳಿಗೆ ಭದ್ರತೆ ನೀಡುವ ಕುರಿತು ಮಾರ್ಗದರ್ಶನ ಮಾಡಿದರು. ವಕೀಲ ಮಂಜುನಾಥ ಮಾದರ, ಮಾನವ ಕಳ್ಳಸಾಗಾಣಿಕೆ ಹಾಗೂ ಮೂಲಕ ನಡೆಯಬಹುದಾದ ದೌರ್ಜನ್ಯ ಕುರಿತು ಅರಿವು ಮೂಡಿಸಿದರು. ವಕೀಲ ಮೇಘರಾಜ ಮೇತ್ರಿ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು, ಅದರಲ್ಲೂ ವಿಶೇಷವಾಗಿ ಸಮಾನತೆ ಹಾಗೂ ಸ್ವಾತಂತ್ರ‍್ಯ ಮತ್ತು ಸಂವಿಧಾನದ ವಿಧಿಗಳಾದ 12, 14, 19 ಹಾಗೂ 21ರ ಕುರಿತಾಗಿ ಮಾಹಿತಿ ನೀಡಿದರು. ಕೊನೆಗೆ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸುವ ಮೂಲಕ ಅವರಲ್ಲಿನ ಗೊಂದಲಗಳನ್ನು ನಿವಾರಿಸಿ ಪೋಕ್ಸೋ ಕಾಯ್ದೆ ಬಗ್ಗೆ ನಾಗಮ್ಮ ಎಮ್.ಇಚ್ಚಂಗಿ ಹೆಚ್ಚಿನ ತಿಳುವಳಿಕೆ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ ಲಮಾಣಿ, ಈ ಕಾರ್ಯಕ್ರಮದ ಅಡಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ಜೀವನದಲ್ಲಿ ಆಳವಡಿಕೊಳ್ಳುವ ಮೂಲಕ ಸದುಪಯೋಗ ಪಡೆಯಲು ಸಲಹೆ ನೀಡಿದರು.
ಪ್ರೀತಿ ಪಾಟೀಲ ಎಲ್ಲರನ್ನು ವಂದಿಸಿದರು. ವಕೀಲರೂ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ರೇಣುಕಾ ಚೌಗುಲೆ, ಸಂದೀಪ ಪಾಕ್ರೆಣ್ಣವರ ಮತ್ತು ಪ್ರಾಧ್ಯಾಪಕರಾದ ರಂಜನಾ ಭಂಡಾರೆ, ಡಾ.ಧನರಾಜ ಕೆಂದುರ, ವಿಠಲ ಕಿತ್ತೂರು, ಎಸ್.ಎಸ್.ಅಂಗಡಿ ಹಾಜರಿದ್ದರು. ಡಾ.ಪರಮಾನಂದ ದಾಸರ ಕಾರ್ಯಕ್ರಮ ನಿರೂಪಿಸಿದರು.