ಹೊನ್ನಾವರ: 2023-24ನೇ ಸಾಲಿನ ತಾಲೂಕಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು. ಮೊಬೈಲ್ ಆಪ್ ಬಳಸಲು ಬಾರದೆ ಇರುವ ರೈತರು ಗ್ರಾಮದಲ್ಲಿ ಕಳೆದ ಬಾರಿ ಸೇವೆಗೈದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದಾಗಿದೆ.
ಸ್ವಯಂ ಸಮೀಕ್ಷೆ: ರೈತರು ಸ್ಮಾರ್ಟ್ಪೋನ್ ಬಳಸಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ರೈತರ ಬೆಳೆ ಸಮೀಕ್ಷೆ 2023-24 (ಮುಂಗಾರು ರೈತರ ಬೆಳೆ ಸಮೀಕ್ಷೆ 2023-24) ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ರೈತರು ತಮ್ಮ ಹೊಲದ ಗಡಿರೇಖೆಯೊಳಗೆ ನಿಂತು ಆಪ್ನಲ್ಲಿ ಇ-ಕೆವೈಸಿ ಮೂಲಕ ಆಧಾರ ದೃಢೀಕರಿಸಿದ ನಂತರ ಮೊಬೈಲ್ಗೆ 6 ಸಂಖ್ಯೆಯ ಒಟಿಪಿ ಬರುವುದನ್ನು ದಾಖಲಿಸಬೇಕು. ಆಪ್ ಒಪನ್ ಆದ ತಕ್ಷಣ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ 4 ಸಂಖ್ಯೆಯ ಒಟಿಪಿ ಬರುವುದನ್ನು ದಾಖಲಿಸಬೇಕು. ನಂತರ ರೈತರ ಸರ್ವೇ ನಂಬರ್ ಕ್ಲಿಕ್ ಮಾಡಿದಾಗ ಜಮೀನಿನ ನಕ್ಷೆಯು ಗೋಚರಿಸುತ್ತದೆ (30ಮೀ. ಗಿಂತ ಕಡಿಮೆ ಗಡಿರೇಖೆ ಒಳಗೆ ಇರಬೇಕು). ಬೆಳೆ ವಿವರ, ಪಹಣಿ, ಮಾಲೀಕರ ವಿವರ, ಬೆಳೆಯ ಛಾಯಾಚಿತ್ರ ಮೊದಲಾದವುಗಳ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕಿ ಪುನೀತಾ ಎಸ್.ಬಿ. ಮಾಹಿತಿ ನೀಡಿದ್ದಾರೆ.
ವಿಮೆ ಮಾಡಿಸಲು ಆ.16 ಕೊನೆಯ ದಿನ
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಭತ್ತದ ಬೆಳೆ (ಮಳೆಯಾಶ್ರಿತ) 2 ಪಟ್ಟಣ ಪಂಚಾಯತಿ ಹಾಗೂ 22 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ವಿಮಾ ಮೊತ್ತ ಎಕರೆಗೆ 25,500 ರೂ., ವಿಮಾ ಕಂತು 510 ರೂ. ಆಗಿದೆ.
ಬೆಳೆಸಾಲ ಪಡೆಯುವ ರೈತರಿಗೆ ಐಚ್ಛಿಕವಾಗಿರುತ್ತದೆ. ವಿಮಾ ಮೊತ್ತವು ಬೆಳೆಸಾಲ ಪಡೆಯುವ ರೈತರಿಗೆ ಮತ್ತು ಬೆಳೆಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಭತ್ತಕ್ಕೆ (ಮಳೆಯಾಶ್ರಿತ ಮತ್ತು ನೀರಾವರಿ) ವಿಮಾ ಪಾವತಿಸುವ ಕೊನೆಯ ದಿನಾಂಕ ಆ.16 ಆಗಿದೆ.
ಹೆಚ್ಚಿನ ಮಾಹಿತಿಗೆ ವಿಮಾ ಕಂಪನಿ (ಎಸ್ಬಿಐ ಜಿಐಸಿ) ಪ್ರತಿನಿಧಿ ಅಣ್ಣಪ್ಪ ನಾಯ್ಕ (ಮೊ.ಸಂ.: tel:+919731695205) ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು, ಸ್ಥಳೀಯ ವಾಣಿಜ್ಯ/ ಗ್ರಾಮೀಣ/ ಸಹಕಾರಿ ಬ್ಯಾಂಕ್ಗಳನ್ನು ಸಂಪರ್ಕಿಸಲು ಕೋರಲಾಗಿದೆ.