ಸಿದ್ದಾಪುರ: ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿರುವ ಗ್ಯಾರಂಟಿಯ0ತೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದೆ. ಆದರೆ ಈ ಉಚಿತ ಪ್ರಯಾಣದ ಕೋಡುಗೆ ಯಾವುದೆ ಭೇದ ಭಾವವಿಲ್ಲದೆ ಎಲ್ಲಾ ಹಿರಿಯ ನಾಗರಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊಡುವುದು ಸೂಕ್ತ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರಲು ಆರಂಭಿಸಿದೆ.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನಂತರ ಬಸ್ ಸಂಚಾರ ಹೆಚ್ಚಾಗಿದೆ. ಆದರೆ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳು ಹೆಚ್ಚಾಗಿಲ್ಲ. ಇದರ ಪರಿಣಾಮ ಎನ್ನುವಂತೆ ಇರುವ ಬಸ್ಗಳು ತುಂಬಿ ತುಳಕುವಂತಾಗಿದೆ. ಹಿರಿಯ ನಾಗರಿಕರು ಮತ್ತು ಚಿಕ್ಕ ಶಾಲಾ ವಿದ್ಯಾರ್ಥಿಗಳು ಬಸ್ ಏರಲು ಹರಸಹಾಸ ಪಡಬೇಕಾಗಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದಾಗಿದೆ. ಇದರ ಪರಿಣಾಮ ಎನ್ನುವಂತೆ ಸಾರಿಗೆ ಬಸ್ ನಂಬಿಕೊ0ಡು ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸರಕಾರಿ ಉದ್ಯೋಗಿಗಳಿಗೆ ತೀವ್ರ ತರಹದ ತೊಂದರೆಗಳು ಎದುರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕಿಂತ ಎಲ್ಲಾ ಹಿರಿಯ ನಾಗರಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಯೋಜನೆ ತೀರ ಅಗತ್ಯವಾಗಿತ್ತು. ಅದು ಹೆಚ್ಚು ಪ್ರಯೋಜನಕಾರಿಯಾಗುತ್ತಿತ್ತು ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೂ ಹೆಚ್ಚಿನ ಹೊರೆ ಆಗುತ್ತಿರಲಿಲ್ಲ. ಯೋಜನೆಯೂ ಸಮರ್ಪಕವಾಗಿ ಬಳಕೆಯಾಗುತ್ತಿತ್ತು ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ.