ಶಿರಸಿ: ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗ, ಕೊಳೆ ರೋಗ ಹಾಗೂ ಹಳದಿ ರೋಗ ಒಳಗೊಂಡು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಈ ಹಿಂದೆ ರಚಿಸಿದ ಅಡಿಕೆ ಕಾರ್ಯಪಡೆಯ(ಅರೇಕಾ ಟಾಸ್ಕ್ಫೋರ್ಸ್) ಅವಧಿಯು ಮುಗಿದಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಅರೇಕಾ ಟಾಸ್ಕ್ಫೋರ್ಸ್ನ ಪುನರ್ ರಚನೆಗೆ ಆಗ್ರಹಿಸಿದೆ.
ರಾಜ್ಯದಲ್ಲಿ ಅಡಿಕೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರಾಜ್ಯದಲ್ಲಿ ಸುಮಾರು 50 ಸಹಕಾರ ಸಂಘಗಳು ಅಡಿಕೆ ವ್ಯವಹಾರ ನಡೆಸುತ್ತಿವೆ. ಅಲ್ಲದೆ 1,500 ಕೋಟಿಯಷ್ಟು ಹಣ ಜಿಎಸ್ಟಿ ಮೂಲಕ ಸರ್ಕಾರಕ್ಕೆ ಅಡಿಕೆ ವ್ಯವಹಾರದಿಂದ ಆದಾಯ ದೊರಕುತ್ತಿದೆ.
ಅಡಿಕೆಗೆ ಬರುವ ಕುಂದು ಕೊರತೆಗಳು ಮತ್ತು ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೋರ್ಟಿನಲ್ಲಿರುವ ಕೇಸುಗಳ ವಿರುದ್ಧ ಹೋರಾಟ ನಡೆಸುವ ಸಂಬಂಧ “ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ” ಸಂಸ್ಥೆಯು ಸ್ಥಾಪನೆಯಾಗಿದ್ದು, ಸಂಸ್ಥೆಯು ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಸರ್ಕಾರ ಅಡಿಕೆ ಬೆಳೆಗಾರರ ಹಿತಕಾಯುವ ದೃಷ್ಟಿಯಿಂದ “ಅಡಿಕೆ ಕಾರ್ಯಪಡೆಯನ್ನು (ಅರೇಕಾ ಟಾಸ್ಕ್ಫೋರ್ಸ್) ರಚಿಸಿತ್ತು.
ಅಲ್ಲದೆ ಸರ್ಕಾರದ ಈ ಹಿಂದಿನ ಆಯ-ವ್ಯಯದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು 10 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಪ್ರಸ್ತುತ ಆಯ-ವ್ಯಯದಲ್ಲಿ 5 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ಇದನ್ನು 10 ಕೋಟಿಗೆ ಕಡಿಮೆ ಇಲ್ಲದಂತೆ ಮೀಸಲಿಡಬೇಕು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ನಲ್ಲಿ ದಾವೆ ಇದೆ. ಇದರ ಬಗ್ಗೆ ಹೋರಾಟ ಅಗತ್ಯವಾಗಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತು ಪಡಿಸಲು ಸಂಶೋಧನೆಯ ಅವಶ್ಯಕತೆಯಿದೆ. ಇದರ ಜವಾಬ್ದಾರಿಯನ್ನು ಈ ಹಿಂದೆ ಎಂ.ಎಸ್ ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ಅಫ್ರೆಡ್ ಸೈನ್ಸ್ ಬೆಂಗಳೂರು ಇವರಿಗೆ ವಹಿಸಿಕೊಡಲಾಗಿತ್ತು. ಸಂಶೋಧನೆ ಕೊನೆಯ ಹಂತದಲ್ಲಿದೆ. ಇದನ್ನು ಪೂರ್ಣಗೊಳಿಸಿ ಇನ್ನು ಹೆಚ್ಚಿನ ಸಂಶೋಧನೆ ಅಗತ್ಯವಿದ್ದಲ್ಲಿ ಸರ್ಕಾರದಿಂದ ಅದಕ್ಕೆ ಪೂರಕವಾಗಿ ಅನುಕೂಲ ಕಲ್ಪಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳವು ಸಿದ್ದರಾಮಯ್ಯ ಅವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗದೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಮಹಾಮಂಡಳದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ಟಿಎಸ್ಎಸ್ ನಿರ್ದೇಶಕ ಹಾಗೂ ಮಹಾಮಂಡಳದ ಉಪಾಧ್ಯಕ್ಷರಾದ ಶಶಾಂಕ ಶಾಂತಾರಾಮ ಹೆಗಡೆ, ಶೀಗೇಹಳ್ಳಿ, ಶಾಸಕ ಅರಗ ಜ್ಞಾನೇಂದ್ರ, ಎಚ್.ಎಸ್. ಮಂಜಪ್ಪ ಸೊರಬ, ಮಾಂಕೋಸ್ ಶಿವಮೊಗ್ಗದ ಉಪಾಧ್ಯಕ್ಷರಾದ ಮಹೇಶ ಮತ್ತು ಶಿವಕುಮಾರ ಚನ್ನಗಿರಿ ಉಪಸ್ಥಿತರಿದ್ದರು.