ಅಂಕೋಲಾ: ಕಾರವಾರ- ಅಂಕೋಲಾ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹಟ್ಟಿಕೇರಿ ಟೋಲ್ ಪ್ಲಾಜಾ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಹತ್ತಾರು ಅವಾಂತರ ಹಾಗೂ ಅವಘಡಗಳನ್ನು ಉದಾಹರಿಸಿದ ಪ್ರತಿಭಟನಾಕಾರರು ಐಆರ್‌ಬಿ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಸ್ಥಳದಲ್ಲಿ ಹಾಜರಿದ್ದ ಆಯ್ ಆರ್ ಬಿ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರಾದರೂ ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದ ಸೈಲ್ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದು ಟೋಲ್ ಶುಲ್ಕ ಪಡೆದುಕೊಳ್ಳಲು ತಮ್ಮದೇನು ಅಭ್ಯಂತರವಿಲ್ಲ. ಆದರೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವಂತಿರುವ ತಾವು ಸದ್ಯಕ್ಕೆ ಟೋಲನ್ನು ಬಂದ್ ಮಾಡದಿದ್ದಲ್ಲಿ ಇಲ್ಲಿಯೇ ಧರಣಿ ಕುಳಿತು ಮತ್ತಷ್ಟು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪಟ್ಟುಹಿಡಿದರು.
ಕೊನೆಗೂ ಪ್ರತಿಭಟನಾಕಾರರ ಆಗ್ರಹಕ್ಕೆ ಶರಣಾದ ಸಂಬಂಧಿತ ಅಧಿಕಾರಿಗಳು ಸದ್ಯಕ್ಕೆ ಟೋಲ್ ಶುಲ್ಕವನ್ನು ಕೈ ಬಿಟ್ಟು ವಾಹನಗಳ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಒಪ್ಪಿಕೊಂಡು, ಟೋಲ್ ಪಡೆಯದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿದರು. ಒಟ್ಟಿನಲ್ಲಿ ಸದ್ಯಕ್ಕಂತೂ ಯಾವುದೆ ಶುಲ್ಕ ಪಾವತಿಸದೇ ಈ ಹೆದ್ದಾರಿಯಲ್ಲಿ ವಾಹನಗಳು ಓಡಾಡುವಂತಾಗಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿ-ಕಿರಿಯ ಮುಖಂಡರು, ಮಹಿಳಾ ಪ್ರಮುಖರು, ಕಾರ್ಯಕರ್ತರು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳದಲ್ಲಿ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಅಂಕೋಲಾ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಇತರೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಕರ್ತವ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸತೀಶ್ ಸೈಲ್, ಜಿಲ್ಲೆಯ ಇನ್ನೊಂದು ಟೋಲ್‌ನಲ್ಲಿಯೂ ಇದೇ ರೀತಿ ಟೋಲ್ ಫ್ರೀ ಓಡಾಟಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿಕೊಂಡಿದ್ದು, ಶಾಸಕ ಸತೀಶ ಸೈಲ್ ಮತ್ತು ಸಚಿವ ಮಂಕಾಳ ವೈದ್ಯ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧದ ತಮ್ಮ ಜನಪರ ಗಟ್ಟಿ ನಿಲುವಿನ ಮೂಲಕ ಐಆರ್‌ಬಿ ಕಂಪನಿಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.