ದಾಂಡೇಲಿ: ದೇಹದೊಳಗೆ ಅಪಾಯಕಾರಿ ವಿಷ ಸೇರಿ ಚಿಂತಾಜನಕ ಸ್ಥಿತಿಯಲ್ಲಿದ್ದ ತಾಲೂಕಿನ ಕುಳಗಿ ಅರಣ್ಯ ಶಾಖೆಯ ಉಪ ವಲಯಾರಣ್ಯಾಧಿಕಾರಿ ಯೋಗೇಶ್ ನಾಯ್ಕ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಮೂಲತ: ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯೋಗೇಶ್ ನಾಯ್ಕ ಅವರು ದಾಂಡೇಲಿ ಅರಣ್ಯ ವಸತಿ ಗೃಹದ ನಿವಾಸಿಯಾಗಿದ್ದಾರೆ. ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಸಾಗುವನಿ ಮಡಿಯೊಳಗಿರುವ ಕಳೆಗಳನ್ನು ನಾಶಪಡಿಸಲು ಕೀಟನಾಶಕ ಸಿಂಪಡಿಸುವ ಸಂದರ್ಭದಲ್ಲಿ ತನ್ನ ಸಹೋದ್ಯೋಗಿಗಳ ಜೊತೆ ತಾನು ಸಹ ಕೀಟನಾಶಕವನ್ನು ಸಿಂಪಡಿಸಿದ್ದಾರು. ಕೀಟನಾಶಕ ಸಿಂಪಡಿಸಿದ ನಂತರ ಯೋಗೇಶ್ ನಾಯ್ಕ ಕೈಯನ್ನು ಸರಿಯಾಗಿ ಸ್ವಚ್ಚಗೊಳಿಸದೇ ನೀರು ಹಾಗೂ ಆಹಾರ ಸೇವಿಸಿದ್ದರೆನ್ನಲಾಗಿದೆ.
ಮರುದಿನ ಯೋಗೇಶ್ ನಾಯ್ಕ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಅನಾರೋಗ್ಯ ಉಲ್ಬಣಗೊಳ್ಳುತ್ತಿದ್ದಂತೆಯೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಯೋಗೇಶ್ ನಾಯ್ಕ ಅವರನ್ನು ದಾಖಲಿಸಲಾಗಿತ್ತು. ಅಲ್ಲಿಯು ಚೇತರಿಸಿಕೊಳ್ಳದ ನಂತರ ಕಳೆದೆರಡು ದಿನಗಳಿಂದ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಂಗಾಂಗ ವೈಫಲ್ಯದಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯೋಗೇಶ್ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಪತ್ನಿ ದಾಂಡೇಲಿ ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎರಡುವರೆ ವರ್ಷದ ಪುಟ್ಟ ಮಗ ಇದ್ದಾನೆಂದು ತಿಳಿದುಬಂದಿದೆ.