ಶಿರಸಿ: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಸ್ಫೋಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಯಕರು ಪರಸ್ಪರ ಕೆಸರೆರೆಚಿಕೊಂಡು ತೀವ್ರ ಮುಜುಗರಕ್ಕೆ ಈಡು ಮಾಡುತ್ತಿದ್ದಾರೆ. ಬಿಜೆಪಿ ಹಿರಿಯ ನಾಯಕ ಕೆ. ಎಸ್.ಈಶ್ವರಪ್ಪ ಅವರ ‘ಸಮಯ ಸಂದರ್ಭ ಬಂದಾಗ ವರಿಷ್ಠರು ಬಾಲ ಕಟ್ ಮಾಡುತ್ತಾರೆ’ ಎಂಬ ಹೇಳಿಕೆ ಕುರಿತು ಮಾಜಿ ಸಚಿವ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಜುಲೈ 3 ರಂದು ಬೆಂಗಳೂರಿನಲ್ಲಿ ನಾವು ಪ್ರತಿಕ್ರಿಯೆ ನೀಡುತ್ತೇವೆ. ಆದರೆ, ಬಾಲ ಕಟ್ ಮಾಡುವ ಕೆಲಸ ಎಂದೂ ಮಾಡಿಲ್ಲ. ಈಶ್ವರಪ್ಪ ಅವರು ಬಿಜೆಪಿ ವರಿಷ್ಠರು ಮುಂಬೈ ಟೀಂ ನ ಬಾಲ ಕಟ್ ಮಾಡುತ್ತಾರೆ ಎಂದಿದ್ದಾರೆ. ಈಶ್ವರಪ್ಪ ಅವರು ಹೇಳಿಕೆ ನೀಡಿ ಮರುದಿನ ವಾಪಸ್ ಪಡೆದಿದ್ದಾರೆ. ಯಾಕೆ ವಾಪಸ್ ತೆಗೆದುಕೊಂಡರು ಎಂದು ಕೇಳುವುದಿಲ್ಲ. ಕೆಲವರಿಗೆ ಮಾತನಾಡುವ ಚಟ. ಅವರಿಗೆ ಟಿಕೆಟ್ ತಪ್ಪಿದ್ದು ಹೇಗೆ? ಯಾಕೆ? ಸಚಿವ ಸ್ಥಾನ ಯಾಕೆ ಕಳೆದುಕೊಂಡರು ಎಂದು ಕೇಳುವುದಿಲ್ಲ” ಎಂದು ತಿರುಗೇಟು ನೀಡಿದರು.
”ಸರಕಾರ ಬರಲು ನಾವೇ ಕಾರಣ. ಶಾಸಕನಾಗಿ 13 ತಿಂಗಳಿಗೆ ರಾಜೀನಾಮೆ ನೀಡಿದ್ದೆವು. ಜವಾಬ್ದಾರಿಯುಳ್ಳ ಜನರು ಶಬ್ದ ಬಳಸುವಾಗ ಎಚ್ಚರಿಕೆ ವಹಿಸಬೇಕು. ಹೆಬ್ಬಾರ್ ಬದಲಾಗೋದಿಲ್ಲ” ಎಂದು ಹೇಳಿದರು.