ದಾಂಡೇಲಿ: ನಗರದ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿನ ಸಾಂಸ್ಕೃತಿಕ ಒಕ್ಕೂಟ ಹಾಗೂ ವಿದ್ಯಾರ್ಥಿನಿಯರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಡಾ.ಶ್ರೀಪಾದ ಭಟ್ ನಿರ್ದೇಶನದ, ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಇವರು ಪ್ರಸ್ತುತ ಪಡಿಸಿದ ಕಾವ್ಯ ಹಂದೆ ಎಚ್. ಅಭಿನಯದ ‘ಹಕ್ಕಿ ಮತ್ತು ಅವಳು’ ಏಕ ವ್ಯಕ್ತಿ ರಂಗ ಪ್ರಯೋಗ ಹಾಗೂ ಕೈವಲ್ಯ ಕಲಾ ಕೇಂದ್ರ ಬೆಂಗಳೂರು ಪ್ರಸ್ತುತ ಪಡಿಸಿದ ಗಣೇಶ.ಎಂ.ಭೀಮನಕೋಣೆ ಸಹ ನಿರ್ದೇಶನದ ಸುಧಾ ಅಡುಕುಳ ರಚನೆಯ ದಿವ್ಯಶ್ರೀ ನಾಯಕ ಸುಳ್ಯ ಮತ್ತು ಶರತ್ ಬೋಪಣ್ಣ ಅಭಿನಯದ ‘ಮಾಧವಿ’ ನಾಟಕದ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ಎನ್.ವಾಸರೆಯವರು ನಾಟಕಗಳು, ರಂಗಭೂಮಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸದೃಢಗೊಳಿಸಿವೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಕನ್ನಡ ನಾಟಕಗಳ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯದ ಕಂಪನ್ನು ಸಾರುತ್ತಿರುವ ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರಿಯಾಶೀಲ ಕಾರ‍್ಯಚಟುವಟಿಕೆಗಳು ಅನುಕರಣೀಯವಾಗಿದೆ ಮತ್ತು ಅಭಿನಂದನೀಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಟಿಯು ನಿರ್ದೇಶಕರಾದ ವಿಜೇತ್ ಸ್ವಾದಿ, ಹಿರಿಯ ಪತ್ರಕರ್ತರಾದ ಯು.ಎಸ್.ಪಾಟೀಲ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ವಹಿಸಿದ್ದರು. ವೇದಿಕೆಯಲ್ಲಿ ರಂಗಕರ್ಮಿಗಳಾದ ಸುಜಯೀಂದ್ರ ಹಂದೆ, ಗಣೇಶ ನೀನಾಸಂ, ಕಾಲೇಜಿನ ಪ್ರಾಧ್ಯಾಪಕರಾದ ಎಸ್.ವಿ.ಚಿಂಚಣಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಮುರ್ತಜಾ ಆನೆಹೊಸೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರುಗಳಾದ ಡಾ.ನಾಸೀರ್ ಖಾನ್ ಜಂಗೂಬಾಯಿಯವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ಡಾ.ವಿನಯಾ.ಜಿ.ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಿ.ಎನ್.ಅಕ್ಕಿ ವಂದಿಸಿದರು. ಉಷಾ ನಾಯ್ಕ ಅವರು ಕಾರ‍್ಯಕ್ರಮ ನಿರೂಪಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ನಡೆದ ‘ಹಕ್ಕಿ ಮತ್ತು ಅವಳು’ ಹಾಗೂ ‘ಮಾಧವಿ’ ನಾಟಕಗಳು ಮನಮೋಹಕವಾಗಿ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆಯಿತು. ಕರ‍್ಯಕ್ರಮದಲ್ಲಿ ಕಾಲೇಜಿನ ಬೋಧಕ ವೃಂದ, ಬೋಧಕೇತರ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು, ರಂಗಭೂಮಿ ಕಲಾವಿದರು ಭಾಗವಹಿಸಿದ್ದರು.